ನಮ್ಮಮ್ಮ ಶಾರದೆ
ರಾಗ : ಮೋಹನ ತಾಳ : ಅಟ
ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ || ಪಲ್ಲವಿ ||
ಕಮ್ಮ ಗೋಲನ ವೈರಿಸುತನಾದ ಸೊಂಡಿಲ
ಹೆಮ್ಮಯ್ಯ ಗಣನಾಥನೆ || ಅನುಪಲ್ಲವಿ ||
ಮೋರೆಕಪ್ಪಿನ ಭಾವ ಮೊರದಗಲ ಕಿವಿ
ಕೋರೆದಾಡಿಯವನ್ಯಾರಮ್ಮ
ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೆ ಅಮ್ಮಯ್ಯ || ೧ ||
ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ
ದಿಟ್ಟ ತಾನಿವನ್ಯಾರಮ್ಮ ಶಿವನ
ಪಟ್ಟದ ರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೆ ಅಮ್ಮಯ್ಯ || ೨ ||
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ
ಕೇಶವನ ದಾಸ ಕಾಣೆ ಅಮ್ಮಯ್ಯ || ೩ ||
Forums
- Log in to post comments