ಎಲ್ಲಿರುವನೋ ರಂಗ

ಎಲ್ಲಿರುವನೋ ರಂಗ

ಎಲ್ಲಿರುವನೋ ರಂಗ ರಾಗ : ಮುಖಾರಿ ತಾಳ: ಝಂಪೆ ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ || ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ || ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು ಭರದೊದೆಯಲವನಪಿತ ಕೋಪದಿಂದ ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ?|| ೧ || ಪಾಪಕರ್ಮವ ಮಾಡಿದಜಮಿಳನ ಯಮಭಟರು ಕೋಪದಿಂದೆಳೆಯುತಿರೆ ಭೀತಿಯಿಂದ ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ ?|| ೨ || ಕರಿರಾಜನನು ನೆಗಳು ನುಂಗುತಿರೆ ಭಯದಿಂದ ಮೊರೆಯಿಡಲು ಕೇಳಿ ತ್ವರಿತದಲಿ ಬಂದು ಕರುಣದಲಿ ಬಂದವನ ಪರಿಹರಿಸೆ ಗಜರಾಜ ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ?|| ೩ || ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ ತರುಹಿ ಹಾ ಕೃಷ್ಣ ಎಂದೊರೆ(*) ಕೇಳ್ದು ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ ಪುರಿಗೆ ದ್ವಾರಾವತಿಯು ಕೂಗಳತೆಯೇ ?|| ೪ || ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ ಗಣನೆಯಿಲ್ಲದ ಮಹಾಮಹಿಮನೆನಿಪ ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು ನೆನೆವರು ಮನದೊಳಿಹನೆಂಬ ಬಿರುದುಂಟಾಗಿ|| ೫ ||
ದಾಸ ಸಾಹಿತ್ಯ ಪ್ರಕಾರ
ಬರೆದವರು