ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ
'ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ'
ರಚನೆ: ಶ್ರೀ ವಾದಿರಾಜ ಸ್ವಾಮಿಗಳು
ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ || ಪ ||
ಆರು ನಾನರಿಯೆ ನೀ ಸರಿರಾತ್ರಿಯಲಿ ಬಂದೀ || ಅ ||
ನೀರೊಳು ಮುಳುಗಿ ನಿಗಮಚೋರನ ಕೊಂದ ನೀರಜಾಕ್ಷನೆ ಭಾಮೆ ನಾನು
ನಾರುವ ಮೈಯ್ಯ ಎನ್ನೊಳು ತೋರದೆ ಸಾರಿ ದೂರ ನೀ ಪೋಗೋ ರಂಗ || 1 ||
ಮಂದರಗಿರಿಯನು ಬೆನ್ನೊಳಗಿಟ್ಟ೦ತ ಸುಂದರವದನನೇ ಭಾಮೆ ನಾನು
ಇಂದು ನಿನಗೆ ತಕ್ಕ ಭಾರಂಗಳಿಲ್ಲವಯ್ಯ ಸಿಂಧುವಿನೊಳಗೆ ಪೋಗೋ ರಂಗ || 2 ||
ಧರಣಿಗೆ ಸುಖವನು ನೀಡಿದ ಸೂಕರ ಪರಮಪುರುಷನೇ ಭಾಮೆ ನಾನು
ವರಾಹರೂಪವು ನಿನ್ನ ಘುರುಘುರು ಶಬ್ದವು ಅರಿವೆ ನೀನಿಲ್ಲಿಂದ ಪೋಗೋ ರಂಗ || 3 ||
ಬಾಲನ ತಾಪವ ಲೀಲೆಯಿಂದರಿತನ ನಾರಸಿಂಹನೆ ಭಾಮೆ ನಾನು
ಮೇಲಿದ್ದ ವಸನವು ಕ್ರೂರ ಕಾರ್ಯಾಂಗಳಲ್ಲ ಕಂಡ೦ಜುವವಳಲ್ಲ ಪೋಗೋ ರಂಗ || 4 ||
ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾನು
ಕೂಸಿನ ರೂಪದಿ ಮೋಸ ಮಾಡಿದವಗೆ ದಾಸಿ ಇನ್ನೊಬ್ಬಳು ಏಕೋ ರಂಗ || 5 ||
ತಾತನ ಮಾತಿಗೆ ಮಾತೆಯ ತರಿದಂತ ಖ್ಯಾತಭಾರ್ಗವನು ನಾನೇ
ಮಾತೆಯ ತರಿದ ಪಾತಕಿ ನಿನಗಿನ್ನು ದೂತಿ ಇನ್ನೊಬ್ಬಳು ಏಕೋ ರಂಗ || 6 ||
ದಶರಥನಂದನ ದಶಮುಖ ಭಂಜನ ಪಶುಪತಿವಂದ್ಯನೆ ಭಾಮೆ ನಾನು
ಹಸನಾದ ಏಕಪತ್ನಿವ್ರತದೊಳಿರುವ ನಿನಗೆ ಹೊಸಕನ್ನಿಕೆಯರು ಏಕೋ ರಂಗ || 7 ||
ಹದಿನಾರು ಸಾಸಿರ ನೂರೆಂಟು ಸುದತಿಯರ ಬದಿಯಲ್ಲಿದ್ದವನೆ ಭಾಮೆ ನಾನು
ಕದನಕ್ಕೆ ಬೇರಿನ್ನು ಮಾರ್ಗಂಗಳಿಲ್ಲವಯ್ಯ ವದನ ಮುಚ್ಚಿಕೊಂಡು ಪೋಗೋ ರಂಗ || 8 ||
ಬೌದ್ಧರ ಕುಲದಲ್ಲಿ ಹುಟ್ಟಿ ದಾನವರ ಮುಗ್ಧರ ಮಾಡಿದೆ ಭಾಮೆ ನಾನು
ಬುದ್ಧ ವಚನಂಗಳು ಎನ್ನಲಿ ಪೇಳಲು ವೃದ್ಧನಾರಿ ನಾನಲ್ಲ ಪೋಗೋ ರಂಗ || 9 ||
ವರತುರಗವನೇರಿ ಧರೆಯನು ಚರಿಸಿದ ದೊರೆವೀರ ನೋಡೆ ಭಾಮೆ ನಾನು
ಕುದುರೆಯ ಚಾಕರಿಯೊಳಿರುವವಗೆ ಇನ್ನು ಯುವತಿಯ ಸುಖವಿನ್ನೆಂತೋ ರಂಗ || 10 ||
ಸರ್ವಪ್ರಾಣಿಗಳನ್ನು ಉದರದಲ್ಲಿಟ್ಟುಕೊಂಡು ಶರಧಿಯೊಳ್ ಮಲಗಿದೆ ಭಾಮೆ ನಾನು
ದೊರೆ ಹಯವದನನ ಚರಣಕೆ ಎರಗುತ ತೆಗೆದಳು ಬಾಗಿಲ ಭಾಮೆ ಆಗ ತೆಗೆದಳು ಬಾಗಿಲ ಭಾಮೆ || 11 ||
______________________________________________________________________
ವಾಸವ = ಇಂದ್ರ; ವಾಸವನನುಜ = ಇಂದ್ರನ ತಮ್ಮ = ಉಪೇಂದ್ರ ಅಂದರೆ ವಿಷ್ಣು
ಸುದತಿ = ಸುಂದರಿ
ತುರಗ = ಕುದುರೆ (ವಾಜಿ, ತೇಜಿ - ಇವು ಕೂಡ ಕುದುರೆ ಎಂಬ ಅರ್ಥ ಹೊಂದಿವೆ)
- Log in to post comments