ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವ ತೋರೋ ಮುಕುಂದನೆ |ಪ|
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ|
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನಂತೆಂದೆನ್ನ ಕು೦ದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ |೧|
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ |೨|
ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|
ದಾಸ ಸಾಹಿತ್ಯ ಪ್ರಕಾರ
- Log in to post comments