ಈತ ಮುಖ್ಯ ಪ್ರಾಣನಾಥ
ರಾಗ ಬೇಹಾಗ್/ಅಟ್ಟ ತಾಳ
ಈತ ಮುಖ್ಯ ಪ್ರಾಣನಾಥ || ಪಲ್ಲವಿ ||
ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ ||
ಭಾನುವಿನ ತುಡಿಕಿದಾತ ಭಾರತಕೆ ಬಂದಾತ
ವಾನರೋತ್ತಮ ಹನುಮ ಹರಿಶರಣನೀತ || ೧ ||
ವಾರಿಧಿಯ ನೆಗೆದಾತ ವನಚರಾಗ್ರೇಸರನೀತ
ವಾರಿಜಾಕ್ಷಿಗೆ ಮುದ್ರಿಕೆ ವಹಿಸಿ ಇತ್ತಾತ || ೨ ||
ಲಂಕಿಣಿಯ ಗೆಲಿದಾತ ಲಂಕೆಯನು ಉರಿಸಿದಾತ
ಪಂಕಜೋದ್ಭವನ ಪಟ್ಟಭದ್ರನೀತ || ೩ ||
ವಾನರೋತ್ತಮನೀತ ವಸುಧೆಗೆ ವೆಗ್ಗಳನೀತ
ದಾನವಾಂತಕ ಹನುಮ ದಶಪ್ರಮತಿಯೀತ || ೪ ||
ಸ್ಮರನಂಬು ಗೆಲಿದಾತ ಶರಣ ಜನರಿಗೆ ದಾತ
ಸಿರಿ ಪುರಂದರವಿಠಲನಿಗೆ ಅಚ್ಛಿನ್ನ ಭಕ್ತನೀತ || ೫ ||
~~~ * ~~~
ಭಾನುವಿನ ತುಡುಕಿದಾತ - ಮಗುವಾಗಿರುವಾಗ ಸೂರ್ಯನನ್ನು ಹಣ್ಣೆಂದು ಬಗೆದು ಸೂರ್ಯಮಂಡಲಕ್ಕೆ ಹಾರಿದವನು.
ಭಾರತಕೆ ಬಂದಾತ - ಮಹಾಭಾರತ ಯುದ್ಧದಲ್ಲಿ ಭೀಮನಾಗಿ ಪಾಲುಗೊಂಡವನು.
ವಾರಿಧಿಯ ನೆಗೆದಾತ - ಸೀತೆಯನ್ನು ಹುಡುಕುತ್ತ ಸಮುದ್ರವನ್ನು ಜಿಗಿದವನು.
ವನಚರಾಗ್ರೇಸರ - ಕಾಡಿನಲ್ಲಿ ಅಲೆದಾಡುವ ವಾನರರಲ್ಲಿ ಮುಂದಾದವನು.
ವಾರಿಜಾಕ್ಷಿಗೆ - ಸೀತೆಗೆ.
ಪಂಕಜೋದ್ಭವನ... - ಮುಂಬರುವ ಕಲ್ಪದಲ್ಲಿ ಹನುಮಂತನು ಬ್ರಹ್ಮ ಪಟ್ಟ (ಪಂಕಜೋದ್ಭವ ಪಟ್ಟ)ವನ್ನು ಪಡೆಯುವನೆಂದು ನಂಬಿಕೆ.
ವೆಗ್ಗಳ - ಹಿರಿಯ.
ದಶಪ್ರಮತಿ - ಮಧ್ವಾಚಾರ್ಯರ ಹೆಸರುಗಳಲ್ಲೊಂದು.
ಸ್ಮರನಂಬು ಗೆಲಿದಾತ - ಸ್ಮರನೆಂದರೆ ಮನ್ಮಥ, ಅವನ ಬಾಣ (ಅಂಬು) ಎಂದರೆ ಮೋಹ; ಇದನ್ನು ಗೆದ್ದವನು’ ನೈಷ್ಠಿಕ ಬ್ರಹ್ಮಚಾರಿ.
ಅಚ್ಛಿನ್ನ - ಎಡೆಬಿಡದ.
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments