ರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ
ರಾಗ - ಯದು ಕುಲ ಕಾಂಬೋದಿ : ತಾಳ - ಆದಿತಾಳ
ರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ | ಪ |
ತುಂಗಾತೀರಾದಿ ರಘುರಾಮನ ಪೂಜಿಪರಾ | ನರಸಿಂಗನ ಭಜಕರಾ | ಅ ಪ |
ಶ್ರೀ ಸುಧೀಂದ್ರಕರ ಸರೋಜ ಸಂಜಾತ | ಜಗದೊಳಗೆ ಪುನೀತ |
ದಾಶರಥಿಯ ದಾಸತ್ವವ ತಾ ವಹಿಸೀ | ದುರ್ಮತಗಳ ಜಯಿಸೀ |
ಈ ಸಮೀರಾಮತ ಸಂಸ್ಥಾಪಕರಾಗೀ | ನಿಂದಕರಾನು ನೀಗೀ |
ಭೂಸುರಾಗೆ ಸಂಸೇವ್ಯ ಸದಾಚರಣೀ | ಕಂಗೊಳಿಸುವ ಕರುಣೀ | ೧ |
ಕುಂದದೆ ವರ ಮಂತ್ರಾಲಯದಲ್ಲಿರುವ | ಕರೆದಲ್ಲಿಗೆ ಬರುವ |
ಬೃಂದಾವನ ಗತ ಮೃತ್ತಿಕೆ ಜಲಪಾನ | ಮುಕ್ತಿಗೆ ಸೋಪಾನ |
ಸಂದರುಶನ ಮಾತ್ರದಲಿ ಮಹತ್ಪಾಪ | ಬಡಿದೋಡಿಸಲಾಪ |
ಮಂದಭಾಗ್ಯಗೆ ದೊರೆಯದಿವರಾ ಸೇವ | ಶರಣರ ಸಂಜೀವ | ೨ |
ಶ್ರೀದವಿಟ್ಠಲನ ಸನ್ನಿಧಾನ ಪಾತ್ರ | ಸಂಸ್ತುತಿಸಿದ ಮಾತ್ರ |
ಮೋದಪಡಿಸುತಿಹ ತಾನಿಹಪರದಲ್ಲಿ | ಈತಗೆ ಸರಿಯೆಲ್ಲಿ |
ಮೇದಿನಿಯೊಳಗಿನ್ನರಸಲು ನಾ ಕಾಣೆ | ಪುಸಿಯಲ್ಲೆನ್ನಾಣೆ |
ಪಾದಸ್ಮರಣೆಯ ಮಾಡದವನೆ ಪಾಪಿ | ನಾ ಪೇಳುವೆ ಸ್ಥಾಪಿ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments