ಶಿವದರುಶನ ನಮಗಾಯಿತು
ರಾಗ: ಮಧ್ಯಮಾವತಿ/ಆದಿ ತಾಳ
ಶಿವದರುಶನ ನಮಗಾಯಿತು ಕೇಳಿ
ಶಿವರಾತ್ರಿಯ ಜಾಗರಣೆ || ಪಲ್ಲವಿ ||
ಪಾತಾಳಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು || ೧ ||
ಬೇಡಿದ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು || ೨ ||
ಹರನನು ಕಂಡೆನು ಪುರಂದರವಿಠಲನ
ಹರಿನಾರಾಯಣನ ಧ್ಯಾನದಲಿ || ೩ ||
~~~ * ~~~
ಜ್ಯೋತಿರ್ಲಿಂಗ - ಪಂಚತತ್ವಗಳಿಗೆ ಅನುಗುಣವಾಗಿ ಪಂಚಲಿಂಗಗಳನ್ನು ಹೇಳುವ ಪ್ರಕ್ರಿಯೆಯಿದೆ. ’ಜ್ಯೋತಿರ್ಲಿಂಗ’ ಅಗ್ನಿತತ್ವವನ್ನು ಪ್ರತಿನಿಧಿಸುತ್ತದೆ.
ದ್ಯೂತಗಳಿಲ್ಲ - ಹೆಣಗಾಟವಿಲ್ಲ.
ಬ್ರಹ್ಮನ ರಾಣಿಯ ನೋಡುವನು - ರುದ್ರನು ಐದನೆಯ ಕಕ್ಷೆಯಲ್ಲಿದ್ದು, ತನ್ನ ಮೇಲಿನ ಕಕ್ಷೆಯಲ್ಲಿ ಉತ್ತಮಳಾದ ಸರಸ್ವತಿಯನ್ನು ಸನ್ನಿಧಾನಪೇಕ್ಷೆಯಿಂದ ನೋಡುವನು.
ರುದ್ರನಿಗೆ ಸರಸ್ವತಿಯ ಮೂಲಕವಾಗಿ ಬ್ರಹ್ಮ, ಬ್ರಹ್ಮನ ಮೂಲಕವಾಗಿ ಲಕ್ಷ್ಮಿ, ಲಕ್ಷ್ಮಿಯ ಮೂಲಕವಾಗಿ ವಿಷ್ಣುವಿನ ಸೇವೆ ಸಿದ್ಧವಾಗುತ್ತದೆ.
[ಪುರಂದರ ಸಾಹಿತ್ಯ ದರ್ಶನ - ಸಂಪುಟ ೨]
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments