ರಂಗ ಬಂದ ಮನೆಗೆ
ಪಲ್ಲವಿ:
ರಂಗ ಬಂದ ಮನೆಗೆ ಶೃಂಗಾರ ನೋಡಿರೋ
ಹಿಂಗದಂಥ ಬಡತನ ಭಂಗವಾಗಿ ಹೋಯಿತೋ
ಚರಣಗಳು:
ಮಾನಾಭಿಮಾನವ ಬಿಟ್ಟು ನಾನಾರಣ್ಯ ತಿರುಗಿದರೆ
ಗೇಣು ಅರಿವೆ ಉಟ್ಟೇನೆನಲು ಹುಟ್ಟು ದೊರೆಯದು
ದಾನವಾಂತಕ ರಂಗ ಬರಲು ನಾನಾ ಪರಿಯ ಪಟ್ಟವಾಳಿ
ತಾನೇ ಬಂದು ಮನೆಯೊಳು ನಿದಾನವಾಯಿತೋ
ಹುಟ್ಟಿದ್ದು ಮೊದಲು ನಾನು ಮೆಟ್ಟಿ ತುಳಿವೆ ದೇಶವೆಲ್ಲ
ಇಟ್ಟೆನೆಂದರೆ ಸೊಟ್ಟ ಕಿವಿಗೆ ಗಟ್ಟಿ ಮುರುವು ಕಾಣೆನೊ
ವಿಟ್ಠಲ ಮನೆಗೆ ಬರಲು ಸೃಷ್ಟಿಯೊಳಗಿಲ್ಲದಂಥ
ಅಷ್ಟ ಸೌಭಾಗ್ಯಗಳ ಮೆಟ್ಟಿ ತುಳಿದೆನೋ
ಹಿಂಡು ಬಂಧುಬಳಗದೊಳು ಖಂಡ ಮಣ್ಣು ಮಾಡಿದರೆ
ದಿಂಡೇಯಳೊಬ್ಬಳ ತಂದು ದಂಡೆ ಕಟ್ಟಿರೊ
ಪುಂಡರೀಕಾಕ್ಷನು ಬರಲು ಭೂಮಂಡಲದೊಳಿಲ್ಲದಂಥ
ಹೆಂಡಿರ ಭೋಗಕೆ ಪ್ರಚಂಡನಾದೆನೋ
ಹಿಂದೆ ರಂಗನ ಭಜಿಸದೆ ಅನೇಕ ಭಂಗವ ಪಟ್ಟೆ
ಮುಂದೆ ರಂಗನ ಭಜಿಸಲು ಸುಕೃತ ಫಲವು
ತಂದೆ ಪುರಂದರ ವಿಟ್ಠಲನ್ನ ಹೊಂದಿ ಭಜಿಸಲಾಗಿ
ಬಂದನು ಭಾಗ್ಯದ ಸಿರಿ ಲಕುಮಿಯನೊಡಗೂಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments