ಮೋಸ ಹೋದೆನಲ್ಲ
ರಾಗ: ಸುರಟಿ ಆದಿತಾಳ
ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ
ಭಾಸುರಾಂಗ ಶ್ರೀ ವಾಸುಕಿಶಯನನ
ಸಾಸಿರ ನಾಮವ ಲೇಸಾಗಿ ಪಠಿಸದೆ* |ಪ|
ದುಷ್ಟ ಜನರ ಕೂಡಿ ನಾನತಿ
ಭ್ರಷ್ಟನಾದೆ ನೋಡಿ
ಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯ
ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ
ಕಾಯವು ಸ್ಥಿರವಲ್ಲ ಎನ್ನೊಳು
ಮಾಯೆ ತುಂಬಿತಲ್ಲ
ಪ್ರಾಯಮದದಿ ಪರಸ್ತ್ರೀಯರ ಕೂಡಾಡಿ
ಕಾಯಜಜನಕನ ಗಾಯನ ಮಾಡದೆ
ಕಂಗಳಿಂದಲಿ ನೋಡೋ ದೇವ ನಿ
ನ್ನಂಗಸಂಗವ ನೀಡೋ
ಮಂಗಳಮಹಿಮ ಶ್ರೀರಂಗವಿಠಲ ಮುಂ
ದಂಗಬಾರದಂತೆ ನೀ ದಯ ಮಾಡೋ
(* - ಪುಸ್ತಕದಲ್ಲಿ ಪಠಿಸಿದೆ ಎಂದಿತ್ತು. ಉಳಿದೆಲ್ಲ ಚರಣ ನೋಡಿದಾಗ ಪಠಿಸದೆ ಎಂದಿರಬೇಕಾದ್ದು ತಪ್ಪು ಪ್ರಿಂಟ್ ಆಗಿದೆಯೇನೋ ಅನಿಸಿದ್ದರಿಂದ ಇಲ್ಲಿ ಪಠಿಸದೆ ಎಂದು ಹಾಕಿದ್ದೇನೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments