ಮೆರೆಯದಿರು ಮೆರೆಯದಿರು ಎಲೆ ಮಾನವ
( ರಾಗ ಮುಖಾರಿ ಝಂಪೆತಾಳ )
ಮೆರೆಯದಿರು ಮೆರೆಯದಿರು ಎಲೆ ಮಾನವ , ನಿನ್ನ
ಸಿರಿಯ ಹವಣೇನು ಹೇಳೆಲೋ ಮಾನವಾ ||ಪ||
ಸಿರಿಯೊಳತಿ ಮಾಧವನೋ ಹಿರಿಯರೊಳು ರೋಮಶನು
ದುರುಳ ರಾವಣನ ಸಂಪದವೊ ನಿನಗೆ
ದುರಿಯೋಧನನವೊಲು ಮಕುಟವರ್ಧನನೋ, ನಿನ್ನ
ಸಿರಿಯ ಹವಣೇನು ಹೇಳೆಲೋ ಮಾನವಾ ||೧||
ಬಲುಹಿನಲಿ ವಾಲಿಯೊ ಚೆಲುವಿಕೆಗೆ ಕಾಮನೊ
ಸಲುಗೆಯಲಿ ನಾರದನೊ ಹೇಳು ನೀನು
ಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲುಗುಣನೊ
ಕುಲದೊಳು ವಶಿಷ್ಠನೊ ಹೇಳೆಲೊ ಮಾನವ ||೨||
ತ್ಯಾಗದಲಿ ಕರ್ಣನೊ ಭೋಗದಲಿ ಸುರಪನೋ
ಭಾಗ್ಯದಲಿ ದಶರಥನೋ ಹೇಳು ನೀನು
ರಾಗದಲಿ ತುಂಬುರನೊ ಯೋಗದಲಿ ಸನಕನೋ
ಹೀಗೆ ಯಾರ ಹೋಲ್ವೆ ನೀ ಹೇಳೆಲೊ ಮಾನವ ||೩||
ಯತಿಗಳೊಳು ಅಗಸ್ತ್ಯನೋ ಜೊತೆಗಳೊಳು ಹನುಮನೋ
ವ್ರತಕೆ ಶುಕೇಶ್ವರನೋ ಹೇಳು ನೀನು
ಶ್ರುತಿ ಪಾಠ ವಿಬುಧರೊಳು ಬೊಂಮನೊ ನಿನ್ನ ಶುಭ-
ಮತಿಯ ಹವಣೇನು ಹೇಳೆಲೋ ಮಾನವಾ ||೪||
ವಿದ್ಯೆಯಲಿ ಸುರಗುರುವೋ ಬುದ್ಧಿಯಲಿ ಮನುಮುನಿಯೊ
ಶ್ರದ್ಧೆಯಲಿ ನೀನಾರ ಹೋಲ್ವೆ ಹೇಳು
ಸಿದ್ಧರೊಳು ನವಕೋಟಿಯೊಳಗೊಬ್ಬನೊ ನೀನು
ಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು ||೫||
ಸೋಲು ಗೆಲ್ಲುವ ಮಾತು ಸಲ್ಲದೊ ನಿನಗೆ
ಎಲ್ಲವನು ಬಿಡು ಗರ್ವ ನಿನಗೇತಕೊ
ಬಲ್ಲೆಯಾದರೆ ಆದಿಕೇಶವನ ಸ್ಮರಣೆಯನ್ನು
ಸೊಲ್ಲು ಸೊಲ್ಲಿಗೆ ನುತಿಸಿ ಸುಖಿಯಾಗಿ ಬಾಳು ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments