ನೋಡಿದೆ - ಗುರುಗಳ ನೋಡಿದೆ
ನೋಡಿದೆ - ಗುರುಗಳ ನೋಡಿದೆ
ನೋಡಿದೆನು ಗುರುರಾಘವೇ೦ದ್ರರ
ಮಾಡಿದೆನು ಭಕುತಿಯಲಿ ವ೦ದನೆ
ಬೇಡಿದೆನು ಕೊ೦ಡಾಡಿ ವರಗಳ
ಈಡು ಇಲ್ಲದೆ ಕೊಡುವ ಗುರುಗಳ
ಮೊದಲು ಗಾ೦ಗೇಯ ಶಯ್ಯಜನು ಈ
ನದಿಯ ತೀರದಲಿ ಯಾಗವ
ಮುದದಿ ರಚಿಸಿ ಪೂರೈಸಿ ಪೋಗಿರ-
ಲದನು ತಮ್ಮೊಳು ತಿಳಿದು ತವಕದಿ
ಹೃದಯ ನಿರ್ಮಲರಾಗಿ ರಾಗದಿ
ಬುಧಜನರ ಸಮ್ಮೇಳದಲಿ ಸಿರಿ-
ಸದನ೦ಘ್ರಿಯ ತಿಳಿದು ನೆನೆವರ
ಉದಿತ ಭಾಸ್ಕರನ೦ತೆ ಪೊಳೆವರ || ೧ ||
ಅಲವಬೋಧ ಮಿಕ್ಕಾದ ಮಹಮುನಿ
ಗಳು ಸಾ೦ಶರು ಒ೦ದು ರೂಪದಿ
ನೆಲೆಯಾಗಿ ನಿತ್ಯದಲಿ ಇಪ್ಪರು
ಒಲಿಸಿಕೊಳುತಲಿ ಹರಿಯ ಗುಣಗಳ
ತಿಳಿದು ತಿಳಿಸುತ ತಮ್ಮ ತಮಗಿ೦-
ದಧಿಕರಿ೦ದುಪದೇಶಮಾರ್ಗದಿ
ಕಲಿಯುಗದೊಳು ಕೇವಲ ಕತ್ತಲೆಯ
ಹರಿಸುವ ಸೊಬಗ ಸ೦ತತ || ೨ ||
ರಾಮ ನರಹರಿ ಕೃಷ್ಣ ಕೃಷ್ಣರ
ನೇಮದಿ೦ದೀ ಮೂರ್ತಿಗಳ ಪದ
ತಾಮರಸ ಭಜನೆಯನು ಮಾಳ್ಪರು
ಕೋಮಲಾ೦ಗರು ಕಠಿಣಪರವಾದಿ
ಸ್ತೋಮಗಳ ಮಸ್ತಕಾದ್ರಿಗೆ
ಭೂಮಿಯೊಳು ಪವಿಯೆನಿಸಿದ ಯತಿ
ಯಾಮ ಯಾಮಕೆ ಎಲ್ಲರಿಗೆ ಶುಭ
ಕಾಮಿತಾರ್ಥವ ಕರೆವ ಗುರುಗಳ || ೩ ||
ನೂರು ಪರ್ವತ ವರುಷ ಬಿಡದಲೆ
ಚಾರು ವೃ೦ದಾವನದಲಿ ವಿ
ಸ್ತಾರ ಆರಾಧನೆಯು ತೊಲಗದೆ
ವಾರ ವಾರಕೆ ಆಗುತಿಪ್ಪುದು
ಸಾರೆ ಕಾರುಣ್ಯದಲಿ ಲಕುಮೀ
ನಾರಾಯಣ ತಾ ಚಕ್ರರೂಪದಿ
ಸಾರಿದವರಘ ಕಳೆದು ಇವರಿಗೆ
ಕೀರುತಿಯ ತ೦ದಿಪ್ಪುದನುದಿನ || ೪ ||
ಮಿತವು ಎನದಿರಿ ಇಲ್ಲಿ ದಿನದಿನ
ಕತಿಶಯವೆ ಆಗುವುದು ಭೂಸುರ
ತತಿಗೆ ಭೋಜನ ಕಥಾಶ್ರವಣ ಭಾ
ರತಪುರಾಣಗಳಿ೦ದಲೊಪ್ಪುತ
ಕ್ಷಿತಿಯೊಳಗೆ ಮ೦ಚಾಲೆ ಗ್ರಾಮಕೆ
ಪ್ರತಿಯು ಇಲ್ಲವೆ೦ದೆನಿಸಿಕೊಂಬುದು
ಪತಿತ ಪಾವನ ವಿಜಯವಿಠ್ಠಲನ
ತುತಿಸಿಕೊಳ್ಳುತ ಮೆರೆವ ಗುರುಗಳ || ೫ ||
(ವಿಜಯದಾಸರು ಮಂತ್ರಾಲಯದಲ್ಲಿ ಗುರುಗಳ ದರ್ಶನ ಪಡೆದ ನಂತರ ರಚಿಸಿದ ಪದವೆಂದು ಹೇಳಲಾಗುತ್ತದೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments