ಕೇಳಲೊಲ್ಲನೆ ಎನ್ನ ಮಾತನು
ಪಲ್ಲವಿ:
ಕೇಳಲೊಲ್ಲನೆ ಎನ್ನ ಮಾತನು ರಂಗ
ಕಾಳಿಯಮರ್ದನ ಕೃಷ್ಣಗೆ ಪೇಳೆ ಗೋಪ್ಯಮ್ಮ ಬುದ್ಧಿ
ಚರಣಗಳು:
ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ
ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ
ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಟ್ಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments