ಈತ ಮುಖ್ಯ ಪ್ರಾಣನಾಥ

ಈತ ಮುಖ್ಯ ಪ್ರಾಣನಾಥ

ರಾಗ ಬೇಹಾಗ್/ಅಟ್ಟ ತಾಳ ಈತ ಮುಖ್ಯ ಪ್ರಾಣನಾಥ || ಪಲ್ಲವಿ || ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ || ಭಾನುವಿನ ತುಡಿಕಿದಾತ ಭಾರತಕೆ ಬಂದಾತ ವಾನರೋತ್ತಮ ಹನುಮ ಹರಿಶರಣನೀತ || ೧ || ವಾರಿಧಿಯ ನೆಗೆದಾತ ವನಚರಾಗ್ರೇಸರನೀತ ವಾರಿಜಾಕ್ಷಿಗೆ ಮುದ್ರಿಕೆ ವಹಿಸಿ ಇತ್ತಾತ || ೨ || ಲಂಕಿಣಿಯ ಗೆಲಿದಾತ ಲಂಕೆಯನು ಉರಿಸಿದಾತ ಪಂಕಜೋದ್ಭವನ ಪಟ್ಟಭದ್ರನೀತ || ೩ || ವಾನರೋತ್ತಮನೀತ ವಸುಧೆಗೆ ವೆಗ್ಗಳನೀತ ದಾನವಾಂತಕ ಹನುಮ ದಶಪ್ರಮತಿಯೀತ || ೪ || ಸ್ಮರನಂಬು ಗೆಲಿದಾತ ಶರಣ ಜನರಿಗೆ ದಾತ ಸಿರಿ ಪುರಂದರವಿಠಲನಿಗೆ ಅಚ್ಛಿನ್ನ ಭಕ್ತನೀತ || ೫ || ~~~ * ~~~ ಭಾನುವಿನ ತುಡುಕಿದಾತ - ಮಗುವಾಗಿರುವಾಗ ಸೂರ್ಯನನ್ನು ಹಣ್ಣೆಂದು ಬಗೆದು ಸೂರ್ಯಮಂಡಲಕ್ಕೆ ಹಾರಿದವನು. ಭಾರತಕೆ ಬಂದಾತ - ಮಹಾಭಾರತ ಯುದ್ಧದಲ್ಲಿ ಭೀಮನಾಗಿ ಪಾಲುಗೊಂಡವನು. ವಾರಿಧಿಯ ನೆಗೆದಾತ - ಸೀತೆಯನ್ನು ಹುಡುಕುತ್ತ ಸಮುದ್ರವನ್ನು ಜಿಗಿದವನು. ವನಚರಾಗ್ರೇಸರ - ಕಾಡಿನಲ್ಲಿ ಅಲೆದಾಡುವ ವಾನರರಲ್ಲಿ ಮುಂದಾದವನು. ವಾರಿಜಾಕ್ಷಿಗೆ - ಸೀತೆಗೆ. ಪಂಕಜೋದ್ಭವನ... - ಮುಂಬರುವ ಕಲ್ಪದಲ್ಲಿ ಹನುಮಂತನು ಬ್ರಹ್ಮ ಪಟ್ಟ (ಪಂಕಜೋದ್ಭವ ಪಟ್ಟ)ವನ್ನು ಪಡೆಯುವನೆಂದು ನಂಬಿಕೆ. ವೆಗ್ಗಳ - ಹಿರಿಯ. ದಶಪ್ರಮತಿ - ಮಧ್ವಾಚಾರ್ಯರ ಹೆಸರುಗಳಲ್ಲೊಂದು. ಸ್ಮರನಂಬು ಗೆಲಿದಾತ - ಸ್ಮರನೆಂದರೆ ಮನ್ಮಥ, ಅವನ ಬಾಣ (ಅಂಬು) ಎಂದರೆ ಮೋಹ; ಇದನ್ನು ಗೆದ್ದವನು’ ನೈಷ್ಠಿಕ ಬ್ರಹ್ಮಚಾರಿ. ಅಚ್ಛಿನ್ನ - ಎಡೆಬಿಡದ.
ದಾಸ ಸಾಹಿತ್ಯ ಪ್ರಕಾರ
ಬರೆದವರು