ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊ

ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊ

ರಚನೆ - ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ ಶಾಂತನ ಮಾನ್ಯವಂತನ ಬಹು ವದಾನ್ಯದಾಂತನ ||೨|| ಹರಿಯ ಭಜಿಸುವ ನರಹರಿಯ ಯಜಿಸುವ ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩|| ಮೋದಭರಿತನ ಪಂಚಭೇದವರಿತನ ಸಾಧುಚರಿತನ ಮನೋವಿಷಾದ ಮರೆತನ ||೪|| ಇವರ ನಂಬಿದ ಜನಕೆ ಭವವಿದೆಂಬುದು ಹವಣವಾಗದೋ ನಮ್ಮವರ ಮತವಿದು ||೫|| ಪಾಪಕೋಟಿಯ ರಾಶಿ ಲೇಪವಾಗದು ತಾಪ ಕಳೆವನು ಬಲು ದಯಾ ಪಯೋನಿಧಿ ||೬|| ಕವನರೂಪದಿ ಹರಿಯ ಸ್ತವನ ಮಾಡಿದ ಭುವನ ಬೇಡಿದ ಮಾಧವನ ನೋಡಿದ ||೭|| ರಂಗನೆಂದನ ಭವವು ಹಿಂಗಿತೆಂಬನ ಮಂಗಳಾಂಗನ ಅಂತರಂಗವರಿತನ ||೮|| ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ ಸೂಸಿ ಪಡೆದನ ಉಲ್ಲಾಸತನದಲಿ ||೯|| ಚಿಂತೆ ಬೇಡಿರೋ ನಿಶ್ಚಿಂತರಾಗಿರೋ ಶಾಂತ ಗುರುಗಳ ಪಾದವಾಂತು ನಂಬಿರೋ ||೧೦|| ಖೇದವಾಗದೋ ನಿಮಗೆ ಮೋದವಾಹುದೊ ಆದಿ ದೇವನ ಸುಪ್ರಸಾದವಾಹುದೋ ||೧೧|| ತಾಪ ತಡೆವನು ಬಂದ ಪಾಪ ಕಡಿವನು ಶ್ರೀಪತಿಯ ಪದ ಸಮೀಪವಿಡುವನು ||೧೨|| ವೇದ ಓದಲು ಬರಿದೆ ವಾದ ಮಾಡಲು ಹಾದಿ ದೊರೆಯದು ಬುಧರ ಪಾದ ನಂಬದೆ ||೧೩|| ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ ರಂಗನೊಲಿಯನು ಭಕ್ತರ ಸಂಗ ದೊರಕದೆ ||೧೪|| ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ ದುಃಖವಲ್ಲದೆ ಲೇಶ ಭಕ್ತಿ ದೊರೆಯದು ||೧೫|| ದಾನ ಮಾಡಲು ದಿವ್ಯಗಾನ ಪಾಡಲು ಜ್ಞಾನ ದೊರೆಯದೊ ಇವರಧೀನವಾಗದೆ ||೧೬|| ನಿಷ್ಠೆ ಯಾತಕೆ ಕಂಡ ಕಷ್ಟವ್ಯಾತಕೆ ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೊ ||೧೭|| ಪೂಜೆ ಮಾಡಲು ಕಂಡ ಗೋಜು ಬೀಳಲು ಬೀಜ ಮಾತಿನ ಫಲ ಸಹಜ ದೊರಕದು ||೧೮|| ಸುರರು ಎಲ್ಲರು ಇವರ ಕರವ ಪಿಡಿವರೊ ತರಳರಂದದಿ ಹಿಂದೆ ತಿರುಗುತಿಪ್ಪರೊ ||೧೯|| ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ ಅಹೋರಾತ್ರಿಲಿ ಸುಖದ ನಿಹವ ಕೊಡುವವು ||೨೦|| ವ್ಯಾಧಿ ಬಾರದೊ ದೇಹಬಾಧೆ ತಟ್ಟದೊ ಆದಿ ದೇವನ ಸುಪ್ರಸಾದವಾಹುದೊ ||೨೧|| ಪತಿತಪಾಮರ ಮಂದಮತಿಯು ನಾ ಬಲು ಸ್ತುತಿಸಲಾಪೆನೆ ಇವರ ಅತಿಶಯಂಗಳ ||೨೨|| ಕರುಣದಿಂದಲಿ ನಮ್ಮ ಪೊರೆವನಲ್ಲದೆ ದುರಿತಕೋಟಿಯ ಬೇಗ ತರಿವ ದಯದಲಿ ||೨೩|| ಮಂದಮತಿಗಳು ಇವರ ಚಂದವರಿಯದೆ ನಿಂದಿಸುವರೊ ಭವದ ಬಂಧ ತಪ್ಪದೊ ||೨೪|| ಇಂದಿರಾಪತಿ ಇವರ ಮುಂದೆ ಕುಣಿವನೊ ಅಂದ ವಚನವ ನಿಜಕೆ ತಂದು ತೋರ್ಪನು ||೨೫|| ಉದಯಕಾಲದಿ ಈ ಪದವ ಪಠಿಸಲು ಮದಡನಾದರು ಜ್ಞಾನ ಉದಯವಾಹುದೊ ||೨೬|| ಸಟೆಯಿದಲ್ಲವೊ ವ್ಯಾಸವಿಠಲ ಬಲ್ಲನೊ ಪಠಿಸಬಹುದಿದು ಕೇಳಿ ಕುಟಿಲರಹಿತರು ||೨೭||
ದಾಸ ಸಾಹಿತ್ಯ ಪ್ರಕಾರ
ಬರೆದವರು