Skip to main content

ವಾಸುದೇವ ನಿನ್ನ ಮರ್ಮಕರ್ಮಂಗಳ

(ಮುಖಾರಿ ರಾಗ ಅಟತಾಳ)

ವಾಸುದೇವ ನಿನ್ನ ಮರ್ಮಕರ್ಮಂಗಳ
ದೇಶದೇಶದಲ್ಲಿ ಪ್ರಕಟಿಸಲೊ ||ಪ||
ಬೇಸರದೆ ಎನ್ನ ಹೃದಯಕಮಲದಲ್ಲಿ
ವಾಸವಾಗಿ ಸುಮ್ಮನಿದ್ದೀಯೊ ||ಅ.ಪ||

ತರಳತನದಲಿದ್ದು ದುರುಳನಾಗಿ ಬಂದು
ಒರಳಿಗೆ ಕಟ್ಟಿಸಿಕೊಂಡುದನು
ತುರುವ ಕಾಯಲಿ ಪೋಗಿ ಕಲ್ಲಿಯೋಗರವನು
ಗೊಲ್ಲರ ಕೂಡೆ ನೀ ಉಂಡುದನು
ನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯ
ಅರಿಯದಂತೆ ಕದ್ದು ಮೆದ್ದುದನು
ಕೆರಳಿಸಿದೆಯಾದರೆ ಒದರುವೆ ಎಲೊ ನರ-
ಹರಿ ಎನ್ನ ಬಾಯಿಗೆ ಬಂದುದನು ||೧||

ಕಟ್ಟಿ ಕರೆವ ಏಳುದಿನದ ಮಳೆಗೆ ವೋಗಿ
ಬೆಟ್ಟವ ಪೊತ್ತದ್ದು ಹೇಳಲೊ
ಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿ
ಹೊಟ್ಟೆಯ ಹೊರೆದದ್ದು ಹೇಳಲೊ
ದುಷ್ಟ ಹಾವಿನ ಹೆಡೆಯನು ತುಳಿದಾಡಿದ
ದುಷ್ಟತನವನು ಹೇಳಲೊ
ನೆಟ್ಟುನೆ ಅಂಬರಕೆತ್ತಿದನ ಹೊಯ್ದು
ಹಿಟ್ಟು ಕುಟ್ಟಿಟ್ಟುದ ಹೇಳಲೊ ||೨||

ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟ
ಬೆಡಗತನವನಿಲ್ಲಿ ಹೇಳಲೊ
ಹಿಡಿಯಬಂದ ಕಾಲಯವನಗಂಜಿ ಕಲ್ಲ
ಪಡೆಯ ಹೊಕ್ಕಿದ್ದು ಹೇಳಲೊ
ಮಡಿದ ಮಗನ ಗುರುವಿಗೆ ಕೊಡಬೇಕೆಂಬ
ಸಡಗರತನವಿಲ್ಲಿ ಹೇಳಲೊ
ಮಡದಿಮಾತಿಗೆ ಪೋಗಿ ನೀ ಪಾರಿಜಾತವ
ತಡೆಯದೆ ತಂದದ್ದು ಹೇಳಲೊ ||೩||

ಮೌನಗೌರಿಯ ನೋನ (?) ಬಂದ ಹೆಂಗಳನೆಲ್ಲ
ಮಾನವ ಕೊಂಡದ್ದು ಹೇಳಲೊ
ತಾನಾಗಿ ಮೊಲೆಯನೂಡಿಸಬಂದವಳನ್ನು
ಪ್ರಾಣವ ಕೊಂಡದ್ದು ಹೇಳಲೊ
ಕಾನನದೊಳು ತುರುವಿಂಡುಗಳನು ಕಾಯ್ದ
ಹೀನತನವನಿಲ್ಲಿ ಹೇಳಲೊ
ಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯ
ಹಾನಿಯ ಮಾಡಿದ್ದು ಹೇಳಲೊ ||೪||

ಧರಣಿಮಗನ ಕೊಂದು ತರುಣಿಯರನು ತಂದ
ದುರುಳತನವನಿಲ್ಲಿ ಹೇಳಲೊ
ಜರೆಯಮಗನಿಗಂಜಿ ಪುರವ ಬಿಟ್ಟು ಹೋಗಿ
ಶರಧಿಯ ಪೊಕ್ಕದ್ದು ಹೇಳಲೊ
ಧರೆಯೊಳಗಧಿಕ ಶ್ರೀರಂಗಪಟ್ಟಣದಲ್ಲಿ
ಸ್ಥಿರವಾಗಿ ನಿಂತದ್ದು ಹೇಳಲೊ
ಶರಣಾಗತರ ಕಾವ ರಂಗವಿಠಲನ್ನೆ
ಪರಮ ದಯಾಳೆಂದು ಹೇಳಲೊ ||೫||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: