ರಂಗನಾಥನ ನೋಡುವ ಬನ್ನಿ

ರಂಗನಾಥನ ನೋಡುವ ಬನ್ನಿ

(ನಾಟಿ ರಾಗ ಛಾಪುತಾಳ) ರಂಗನಾಥನ ನೋಡುವ ಬನ್ನಿ ಶ್ರೀ- ||ಪ|| ರಂಗನ ದಿವ್ಯ ವಿಮಾನದಲ್ಲಿಹನ ||ಅ.ಪ|| ಕಮನೀಯಗಾತ್ರನ ಕರುಣಾಂತರಂಗನ ಕಾಮಿತಾರ್ಥವೀವ ಕಲ್ಪವೃಕ್ಷನ ಕಮಲದಳ ನೇತ್ರನ ಕಸ್ತೂರಿರಂಗನ ಕಾಮಧೇನು ಕಾವೇರಿರಂಗನ ||೧|| ವಾಸುಕಿಶಯನನ ವಾರಿಧಿನಿಲಯನ ವಾಸುದೇವ ವಾರಿಜನಾಭನ ವಾಸವಾದಿ ಭಕ್ತ ಹೃದಯಾಂಬುಜದಲ್ಲಿ ವಾಸವಾಗಿರುತಿಹ ವಸುದೇವಸುತನ ||೨|| ಮಂಗಳಗಾತ್ರನ ಮಂಜುಳಭಾಷನ ಗಂಗಾಜನ ಅಜಜನಕನ ಸಂಗೀತಲೋಲನ ಸಾಧುಸಮ್ಮತನ ರಂಗವಿಠಲ ರಾಜೀವನೇತ್ರನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು