ಬಿಡೆನು ಬಿಡೆನು ನಿನ್ನ

ಬಿಡೆನು ಬಿಡೆನು ನಿನ್ನ

ಬಿಡೆನು ಬಿಡೆನು ನಿನ್ನ ಚರಣಕಮಲವ ಎನ್ನ |ಪ| ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ|ಅ.ಪ| ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೆ| ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವೆಂದು ಹರ ಧರಿಸಿದನಾಗ|| ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ ಪಾಷಾಣವಾಗುತ್ತ ಪಥದೊಳಗಿರಲು| ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು ಪಾಪರಹಿತಳಾಗಿ ಪದವಿ ಕಂಡಳಾಗ|| ವಜ್ರಾಂಕುಶಧ್ವಜ ಪದುಮರೇಖೆಗಳಿಂದ ಪ್ರಜ್ವಲಿಸುವ ನಿನ್ನ ಪಾದ ಪದ್ಮವನು| ಘರ್ಜಿಸಿ ಭಜಿಸುವೆ ಹಯವದನನೆ ಭವ- ಜರ್ಜರ ಬಿಡಿಸುವೆನೆಂದು ನಂಬಿಹೆನಾಗಿ||
ದಾಸ ಸಾಹಿತ್ಯ ಪ್ರಕಾರ
ಬರೆದವರು