ಬಾರೋ ಮನೆಗೆ ಗೋವಿಂದ

ಬಾರೋ ಮನೆಗೆ ಗೋವಿಂದ

(ಆರಭಿ ರಾಗ ಅಟ್ಟತಾಳ) ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವ ತೋರೋ ಎನಗೆ ಮುಕುಂದ ನಲಿದಾಡು ಮನದಲಿ ಮಾರಪಿತ ಆನಂದನಂದನ್ನ ಕಂದ ||ಪ|| ಚಾರುತರ ಶರೀರ ಕರುಣಾ- ವಾರಿನಿಧಿ ಭವ ಘೋರನಾಶನ ವಾರಿಜಾಸನ ವಂದ್ಯ ನಿರಜ ಸಾರ ಸದ್ಗುಣ ಹೇ ರಮಾಪತೆ ||ಅ.ಪ|| ನೋಡೋ ದಯದಿಂದೆನ್ನ, ಕರಪದುಮ ಶಿರದಲಿ ನೀಡೋ ಭಕ್ತಪ್ರಸನ್ನ , ನಲಿದಾಡೊ ಮನದಲಿ ಬೇಡಿಕೊಂಬೆನೊ ನಿನ್ನ , ಆನಂದ ಘನ್ನ ಮಾಡದಿರು ಅನುಮಾನವ , ಕೊಂ- ಡಾಡುವೆನು ತವ ಪಾದಮಹಿಮೆಗಳನು ಜೋಡಿಸುವೆ ಕರಗಳನು ಚರಣಕೆ ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು ಕ್ಲೇಶ ಪಡುವುದು ಬಲ್ಲಿ , ಘನ ಯುವತಿಯರ ಸುಖ ಲೇಸು ಎಂಬುದನು ಕೊಲ್ಲಿ , ಆಸೆ ಬಿಡಿಸಿಲ್ಲಿ ಏಸು ಜನುಮದ ದೋಷದಿಂದಲಿ ಈಸುವೆನು ಇದರೊಳಗೆ , ಇಂದಿಗೆ ಮೋಸವಾಯಿತು ಆದುದಾಗಲಿ ಶ್ರೀಶ ನೀ ಕೈಪಿಡಿದು ರಕ್ಷಿಸು ||೨|| ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆ ದೀನ ಜನರಿಗೆ ಬಂಧು - ನಾ ನಿನ್ನ ಸೇವಕ ಶ್ರೀನಿವಾಸ ಎಂದೆಂದು ಕಾರುಣ್ಯ ಸಿಂಧು ಪ್ರಾಣಪತಿ ಹೃದಯಾಬ್ಜ ಮಂಟಪ - ಸ್ಥಾನದೊಳಗಭಿವ್ಯಾಪ್ತ ಚಿನುಮಯ ಧ್ಯಾನಗೋಚರನಾಗಿ ಕಣ್ಣಿಗೆ ಕಾಣಿಸುವೆ ಶ್ರೀರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು