ನೋಡಿದರೆ ನೋಡು ಮಾತಾಡು ತಾಯಿಗಳೆಂದು
(ರಾಗ ಮುಖಾರಿ ಝಂಪೆ ತಾಳ)
ನೋಡಿದರೆ ನೋಡು ಮಾತಾಡು ತಾಯಿಗಳೆಂದು
ನೋಡಿ ಭ್ರಮಿಸಲು ಬೇಡ ಪರಸತಿಯರ ||ಪ||
ದಾರಿಯೊಳು ಭಯವೆಂದು ಚೋರರೊಳು ಹೋಗುವರೆ
ಕೇರು ಬೀಜದ ತೈಲ ಲೇಪಿಸುವರೆ
ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ-
ದೇರುವರೆ ಪರಸತಿಯ ಪಾಪಿ ಮನವೆ ||೧||
ಹಸಿಯ ಎಕ್ಕೆಯ ಕಾಯಿ ನಸುಗುನ್ನಿ ತುರಚೆಯನು
ತೃಷೆಗೆ ಮೆಲುವರೆ ವ್ಯಸನದೋರೀತೆಂದು
ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ
ವಿಷಯಕೆಳಸುವದೇಕೆ ಪಾಪಿ ಮನವೆ ||೨||
ಪ್ರೀತಿಯಿಂದಲಿ ಸತಿಯ ಮನೆಗಾಗಿ ಇಂದ್ರನತಿ-
ಕಾತುರದಿ ಹೋಗಿ ಮೈ ತೂತಾದನು
ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ
ಸೋತು ದ್ರೌಪದಿಗೆ ಕೀಚಕ ಕೆಟ್ಟನು ||೩||
ಕೆಟ್ಟವರ ದೃಷ್ಟ ಇನ್ನೆಷ್ಟು ಹೇಳಿದರೇನು
ಬಿಟ್ಟುಬಿಡುವರೆ ತಮ್ಮ ಕೆಟ್ಟ ಗುಣವ
ಕಟ್ಟಿನೊಳಗಿಟ್ಟು ಉತ್ಕೃಷ್ಟ ಜನಗಳ ಸಂಗ
ಕೊಟ್ಟು ಸಲಹೊ ಅಚಲಾನಂದ ವಿಠ್ಠಲ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments