ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ

ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ

( ರಾಗ ಮುಖಾರಿ ಆದಿತಾಳ) ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ ಪನ್ನಗಾಶಯನ ಹರಿ ವೇಂಕಟರಮಣ ||ಪ|| ವರಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ ಕರಿಯ ಸಲಹಿದಂತೆ ಕರುಣವಿರಲಂತೆ ||೧|| ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ ಧುರದೊಳು ನರನ ಶಿರವ ಉಳುಹಿದಂತೆ ||೨|| ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ ಕ್ಲೇಶಪಾಶವಿನಾಶ ಜನಪೋಷ ವೇಂಕಟೇಶ ||೩|| ಪರಮ ಮಂಗಳಮೂರ್ತಿ ಪಾವನಕೀರ್ತಿ ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ ||೪|| ಮಕರಕುಂಡಲ ಧರ ಮುಕುಟಕೇಯೂರ ಸಕಲಾಭರಣಹಾರ ಸ್ವಾಮಿ ಉದಾರ ||೫|| ತಾಳಲಾರೆನು ನಾನು ಬಹಳ ದಾರಿದ್ರ್ಯ ಕೇಳುವರಿಲ್ಲ ಬಹು ಭವಭಯ ಕ್ಷುದ್ರ ||೬|| ನೋಡಬೇಡೆನ್ನವಗುಣವ ದಮ್ಮಯ್ಯ ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ ||೭|| ಭಕ್ತಜನ ಸಂಸಾರಿ ಬಹುದುರಿತಹಾರಿ ಮುಕ್ತಿದಾಯಕ ದಾರಿ ಮುಂದೆ ನೀ ತೋರಿ ||೮|| ವರಾಹ ತಿಮ್ಮಪ್ಪ ಒಲವಾಗೆನ್ನಪ್ಪ ಸಾರಿದವರ ತಪ್ಪ ಸಲಹೋ ನೀನಪ್ಪ ||೯|| -- ರಚನೆ ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು