Skip to main content

ದಾಸರೆಲ್ಲರ 'ವಸ್ತು' ಒಂದೇ ಆಗಿದ್ದರೂ, ಸಮಾಜಿಕ ದೃಷ್ಟಿಕೋನ ಅಪೂರ್ವವಾದದ್ದು

ಹಬ್ಬ ಹರಿದಿನಗಳಿದ್ದಾಗ ನಮ್ಮೂರಲ್ಲಿ ಭಜನೆ-ಕೀರ್ತನೆಗಳ ಮಹಾಪೂರವೇ ಹರಿಯುತ್ತದೆ. ಊರಿನ ಜನ ಧರ್ಮ-ತತ್ವ-ನೀತಿಗಳನ್ನೊಳಗೊಂಡ ಭಜನೆ-ಕೀರ್ತನೆಗಳನ್ನು ಮನದಣಿಯುವತನಕ ಹಾಡಿ ಮೈಮರೆಯುತ್ತಾರೆ.ಕೆಲವೊಮ್ಮೆ ನಾನು ಸಹ ಆ ಕೀರ್ತನೆಗಳನ್ನು ಕೇಳಿದ್ದುಂಟು. "ಅಂಬಿಗ ನಾ ನಿನ್ನ ನಂಬಿದೆ", "ಎನ್ನ ಮನದ ಡೊಂಕು ತಿದ್ದೇಯಾ...", "ಗಿಳಿಯು ಪಂಜರದೊಳಿಲ್ಲ..", "ಮಾನವ ಜನ್ಮ ದೊಡ್ಡದೊ.." ಹಾಗು ಅನೇಕ ಹಾಡುಗಳು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ. ಬಹಳ ದಿನಗಳಿಂದ ಕನ್ನಡ ಸಾಹಿತ್ಯದಲ್ಲಿ ಹಚ್ಚ ಹಸುರಾಗುಳಿದ ಕೀರ್ತನಕಾರರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಇದ್ದರೂ ಸೋಮಾರಿತನದಿಂದ ಅದರ ಗೊಡವೆಗೆ ಹೋಗಿರಲಿಲ್ಲ. ಕೊನೆಗೂ ಆ ಸಾಹಸ ಮಾಡಿದೆ.

ಇಡೀ ದಾಸ ಸಾಹಿತ್ಯವನ್ನು ಅವಲೋಕಿಸಿದರೆ, ದಾಸರೆಲ್ಲಾ ಹಾಡಿದ್ದನ್ನೆ ಹಾಡಿದ್ದಾರಲ್ಲ ಎನಿಸಿಬಿಡುತ್ತದೆ. ಯಾವುದೇ ಕೀರ್ತನೆಯನ್ನು ತೆಗೆದುಕೊಳ್ಳಿ ಅದರ ಉದ್ದೇಶ ಇಷ್ಟೆ, "ಆತ್ಮವಿಮರ್ಶೆ, ಆತ್ಮನಿಂದನೆ, ಮೋಕ್ಷ, ಮುಕ್ತಿ, ತತ್ವ ಮತ್ತು ನೀತಿ." ಆಧುನಿಕ ಕನ್ನಡ ಸಾಹಿತ್ಯವನ್ನು ಹೊರತುಪಡಿಸಿದರೆ, ಇಡೀ ಕನ್ನಡ ಸಾಹಿತ್ಯದಲ್ಲಿ ಕಾಣುವ ಸಾಹಿತ್ತಿಕ ವಸ್ತು ಬರೀ "ಧರ್ಮ-ತತ್ವ-ನೀತಿ" ಮಾತ್ರ. ೧೨ನೇ ಶತಮಾನದ ವಚನಕಾರರಿಗಿಂತ ಮುಂಚೆ ಪಂಪನ ಕಾಲದಲ್ಲಿ (ಪಂಪಯುಗದಲ್ಲಿ) ಕವಿಗಳು ಹೇಳಿದ್ದಿಷ್ಟೆ, "ಸಾಹಿತ್ಯ ಇರುವುದು ಜನರ ಶ್ರೇಯಸ್ಸನ್ನು ಸಾಧಿಸಲು. ಇದು ಪಾಪ, ಇದು ಪುಣ್ಯ, ಇದು ಹಿತ, ಇದು ಅಹಿತ, - ಎನ್ನುವುದನ್ನು ತಿಳಿಯ ಹೇಳಲು. ಒಟ್ಟಿನಲ್ಲಿ ಪುರುಷಾರ್ಥ ಪ್ರಾಪ್ತಿಗೋಸ್ಕರ [ಜಿ. ಎಸ್. ಶಿವರುದ್ರಪ್ಪ, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ]." ಕೆಲವೊಮ್ಮೆ ಧರ್ಮದ ಉದ್ದೇಶವೇ ಕಾವ್ಯದ ಉದ್ದೇಶವಾಗಿದ್ದುಂಟು. ಪಂಪನ ನಂತರ ೧೨ನೇ ಶತಮಾನದಲ್ಲಿ ಬಂದ ವಚನಕಾರರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಅವರ ಸಾಹಿತ್ಯದ ವಸ್ತು ಮಾತ್ರ ಮತ್ತೆ ಅದೇ, "ಧರ್ಮ-ತತ್ವ-ನೀತಿ". ೧೫ನೇ ಶತಮಾನದಲ್ಲಿ ಬಂದ ಕುಮಾರವ್ಯಾಸನು ಕೂಡ ಸಾಹಿತ್ಯದ ವಸ್ತುವಿನ ಆಯ್ಕೆಯಲ್ಲಿ ಪಂಪನ ಹಾದಿಯನ್ನೇ ಹಿಡಿದನು. ವಚನಕಾರರ ನಂತರ ಬಂದ ವ್ಯಾಸರಾಯರು, ಪುರಂದರದಾಸರು, ಕನಕದಾಸರು ಕೂಡ ತಮ್ಮ ಕೀರ್ತನೆಗಳ ವಸ್ತುವಿನ ಆಯ್ಕೆಯಲ್ಲಿ ಹೆಚ್ಚು ಕಮ್ಮಿ ವಚನಕಾರರ ಹಾದಿಯನ್ನೇ ಹಿಡಿದರು. ’ಪಂಪ-ಕುಮಾರವ್ಯಾಸರು’ ಮತ್ತು ’ವಚನಕಾರರು-ದಾಸರಲ್ಲಿರುವ’ ವ್ಯತ್ಯಾಸ ಇಷ್ಟೆ, "ಪಂಪ-ಕುಮಾರವ್ಯಾಸರು ಸಂಸಾರಿಕ ಜೀವನದ ನಶ್ವರತೆಯನ್ನು ಎತ್ತಿಹಿಡಿದು, ಮೋಕ್ಷವೇ ಜೀವನದ ಅಂತಿಮ ಗುರಿ ಎಂದರು. ಆದರೆ ವಚನಕಾರರು-ದಾಸರು ಸಂಸಾರಿಕ ಜೀವನವನ್ನು ಅತ್ಯಂತ ಸಹಾನುಭೂತಿಯಿಂದ ನೋಡಿ, ಸಂಸಾರದಲ್ಲಿದ್ದುಕೊಂಡೇ ಭಗವಂತನ ಸಹಾಯದಿಂದ ಮುಕ್ತಿಯನ್ನು ಪಡೆಯಬಹುದೆಂದರು." ನಂತರ ಬಂದ ಹರಿಹರ ಕೂಡ ರಗಳೆಗಳ ರೂಪದಲ್ಲಿ ಭಕ್ತಿಯ ಮಾರ್ಗವನ್ನೇ ಹಿಡಿದ, ರಾಘವಾಂಕ ಮತ್ತೆ ಪಂಪ-ಕುಮಾರವ್ಯಾಸರ ಹಾದಿಯನ್ನು ತುಳಿದ. ಇಡೀ ಕನ್ನಡ ಸಾಹಿತ್ಯದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಮಾತ್ರ ವೈವಿಧ್ಯತೆಯಿಂದ ಕೂಡಿದೆ ಅನಿಸುತ್ತದೆ. ಸಾಹಿತ್ತಿಕ ವಸ್ತುವಿನ ದೃಷ್ಟಿಯಿಂದ ಅದೇನೆ ಇದ್ದರೂ, ಸಾಮಾಜಿಕ ಮತ್ತು ಸಂಗೀತದ ದೃಷ್ಟಿಯಿಂದ ವಚನಕಾರರ ಮತ್ತು ದಾಸರ ಕೊಡುಗೆ ಅಪೂರ್ವವಾದುದು. ಬಸವಾದಿ ಶರಣರು ಕನ್ನಡ ಸಾಹಿತ್ಯಕ್ಕೆ ವಚನಗಳೆಂಬ ಅಪೂರ್ವ ಕಾಣಿಕೆ ಕೊಟ್ಟಂತೆ ಪುರಂದರಾದಿ ದಾಸರು ಕೀರ್ತನೆಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

"ಕೀರ್ತನೆಗಳು ಹುಟ್ಟಿಕೊಂಡದ್ದು ಹಾಡಾಗಿಯೇ, ಹಾಡುವುಕ್ಕಾಗಿಯೇ. ಮೊದಲು ಪಲ್ಲವಿ, ಅನುಪಲ್ಲವಿ ಅನಂತರ ನಾಲ್ಕು ಪಾದಗಳ ಕೆಲವು ಪದ್ಯಗಳು. ಇದು ಕೀರ್ತನೆಗಳ ರೂಪ. ಮಾದ್ವಮತದ ತತ್ವಜ್ಞಾನ, ತಾರತಮ್ಯಗಳನ್ನು ಅನುಸರಿಸಿ ದೇವತಾ ಸ್ತುತಿ, ಪರಮಾತ್ಮನ ವಿವಿಧ ಲೀಲೆಗಳ ಉಲ್ಲೇಖ, ವೈಯಕ್ತಿಕವಾದ ಅನಿಸಿಕೆ, ತೊಳಲಾಟಗಳು ಮತ್ತು ಸಮಾಜ ವಿಮರ್ಶೆ, ಇವು ಕೀರ್ತನೆಗಳ ವಸ್ತುಗಳಾಗಿವೆ[ಜಿ. ಎಸ್. ಶಿವರುದ್ರಪ್ಪ]." "ಕೀರ್ತನೆಗಳ ಮುಖ್ಯ ಭಾವ ಭಕ್ತಿ. ವಿಶ್ವದ ಮೂಲಭೂತ ಸತ್ಯದ (Fundamental truth of the world) ಅರಿವಿಗೆ ಈ ಭಕ್ತಿಮಾರ್ಗ ಸುಲಭವೆಂಬುದು ಕೀರ್ತನಕಾರರ ಒಟ್ಟು ಧಾಟಿ. ತಮ್ಮ ಇಷ್ಟದೈವವನ್ನವರು ಭಕ್ತಿಯ ನಾನಾ ಮುಖಗಳಿಂದ ಅರ್ಚಿಸುತ್ತ ತಮ್ಮ ದಾರಿಯನ್ನು ಕಂಡುಕೊಳ್ಳುವುದರೊಂದಿಗೆ ಸಮಾಜದಲ್ಲೂ ಒಂದು ಹಾದಿಯನ್ನು ಸಿದ್ಧಪಡಿಸಿದರು. ಸಂಸಾರದ ನಿಸ್ಸಾರತೆ ಸಶ್ವರತೆಗಳನ್ನು ಎತ್ತಿ ಹಿಡಿಯುವುದು, ತನ್ಮೂಲಕ ಲೌಕಿಕ ಭೋಗದಲ್ಲಿ ತೊಡಗಿ ಯಾವ ಹೇಯಕ್ಕಾದರೂ ಸಿದ್ಧವಾಗುವ ಮನಸ್ಸನ್ನು ಭಗವಂತನ ಕಡೆ ತಿರುಗಿಸುವುದು. ಹಾಗೆ ತಿರುಗಿಸಿ ಶಾಶ್ವತವಾದ ಸುಖದ ಕಡೆ ಜನಸಾಮಾನ್ಯರನ್ನು ಒಯ್ದು ಸ್ಥಾಪಿಸುವುದು. ಇದು ಕೀರ್ತನಕಾರರ ಒಟ್ಟು ಗುರಿ. ವೈಯಕ್ತಿಕ ಮೋಕ್ಷದ ಸ್ವಾರ್ಥಕ್ಕೆ ಮಾತ್ರ ತಲ್ಲಣಿಸದೆ ಇಡೀ ಒಂದು ಸಮಾಜದ ಉತ್ಥಾನಕ್ಕೆ ಪ್ರಯತ್ನಿಸಿದ ಈ ಭಕ್ತ ಪರಂಪರೆಯ ದೃಷ್ಟಿ ಆ ಕಾರಣದಿಂದ ವಿಶಿಷ್ಟವಾದುದು; ಮತ್ತು ಸಾಮಾಜಿಕವಾಗಿ ಮಹತ್ವದ್ದು [ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ]."

ಕೀರ್ತನೆಗಳಲ್ಲಿ ಸಾಹಿತ್ಯ ಬೇಕಾದರೆ ಸಾಹಿತ್ಯವಿದೆ, ಸಂಗೀತ ಬೇಕಾದರೆ ಸಂಗೀತವಿದೆ, ಆಧ್ಯಾತ್ಮ, ತತ್ವ, ನೀತಿ ಬೇಕಾದರೆ ಅದೂ ಇದೆ. "ದಾಸರ ರಚನೆಗಳಲ್ಲಿ ಸಂಗೀತದ ಮಾಧುರ್ಯವೂ, ಸಾಹಿತ್ಯದ ಸ್ವಾರಸ್ಯವೂ, ಧರ್ಮದ ಸಂದೇಶವೂ ಸರಿಸಮಾನಾಗಿ ಬೆರೆತು ಎಲ್ಲರಿಗೂ ಪ್ರಿಯವಾದುವುಗಳಾಗಿವೆ." ದಾಸರ ಕೀರ್ತನೆಗಳಲ್ಲಿ ಸಂಸ್ಕೃತದ ಆಡಂಬರವಿಲ್ಲ, ಸಂಧಿ-ಸಮಾಸಗಳ ಕ್ಲಿಷ್ಟತೆಯಿಲ್ಲ. "ಅಂತರಂಗದ ಅನುಭವಗಳನ್ನು, ತುಮುಲಗಳನ್ನು ನೇರವಾಗಿ, ಪ್ರಾಮಾಣಿಕವಾಗಿ, ತಿಳಿದ ಭಾಷೆಯಲ್ಲಿ, ಜನಸಾಮಾನ್ಯರಿಗೆ ತಿಳಿಯುವಂತೆ" ಹೇಳಿದರು. ಉದಾಹರಣೆಗೆ, ಜಾತಿ ವ್ಯವಸ್ಥೆಯ ಬಗ್ಗೆ ದಾಸರಿಗಿದ್ದ ಅಸಹನೆಯನ್ನು ಪ್ರತಿಬಿಂಬಿಸುವ ಪದ್ಯವನ್ನೇ ತೆಗೆದುಕೊಳ್ಳಬಹುದು.

ಹೊಲೆಯ ಬಂದನೆಂದು ಒಳಗೆ ದೇವರ ಮಾಡಿ
ಗಣ ಗಣ ಗಂಟೆಯ ಬಾರಿಸುವರಯ್ಯ
ತನುವಿನ ಕೋಪವು ಹೊಲೆಯಲ್ಲವೇ?
ಪರಧನ ಪರಸತಿ ಹೊಲೆಯಲ್ಲವೇ?
ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟರೆ
ಇದಕೇನು ಮದ್ದೋ ಪುರಂದರ ವಿಠಲ||

"ದಾಸರು ’ಹೊಲೆತನೆಂಬುದು (ಕೀಳುಜಾತಿಯೆಂಬುದು)’ ಹುಟ್ಟಿನಿಂದಲ್ಲ, ಗುಣಕರ್ಮದಿಂದ ಎಂಬುದನ್ನು ಅನೇಕ ಹೋಲಿಕೆಗಳಿಂದ ಚಿತ್ರಿಸುತ್ತಾರೆ. ಹೀಗೆ ನಡೆದವನು ಹೊಲೆಯ ಎಂದು ಪುರಂದರದಾಸರು ಕೊಡುವ ಪಟ್ಟಿ ಅವರ ದೃಷ್ಟಿಯ ನೈತಿಕ ಮೌಲ್ಯಗಳನ್ನು ಸೂಚಿಸುತ್ತದೆ." ದಾಸರು ಜನ ಸಾಮಾನ್ಯರ ಭಾಷೆಯನ್ನು ಬಳಸಿದರು. ಗಾಯನ ನರ್ತನಗಳ ಮುಖಾಂತರ ಜನತೆಯ ಮೌಢ್ಯ, ಕುಂದು ಕೊರತೆ, ಲೋಪ ದೋಷಗಳನ್ನು ಕಟೂಕ್ತಿಯಿಂದ ಖಂಡಿಸಿ, ತಿಳಿ ಹೇಳಿ ಅಸಮಾನ್ಯ ನೈತಿಕ ಧೈರ್ಯವನ್ನೂ ಸಾಮಾಜಿಕ ಪ್ರಜ್ಞೆಯನ್ನೂ ವ್ಯಕ್ತಪಡಿಸಿದರು. ಕೀರ್ತನೆಗಳ ಮುಖಾಂತರ ಸಮಾಜದ ಸಾರ್ವತ್ರಿಕ ಏಳ್ಗೆಗಾಗಿ ದುಡಿದರು. ದಾಸರೆಲ್ಲರ ಕೀರ್ತನೆಗಳ ವಸ್ತು ಹೆಚ್ಚು ಕಮ್ಮಿ ಒಂದೇ ಆಗಿದ್ದರೂ, ಅವರ ಸಾಮಾಜಿಕ ದೃಷ್ಟಿಕೋನ ಕನ್ನಡ ಸಾಹಿತ್ಯಲ್ಲಿ ಹಚ್ಚ ಹಸುರಾಗಿ ಉಳಿದಿದೆ.

ದಾಸ ಸಾಹಿತ್ಯ ಪ್ರಕಾರ: 
ಬರೆದವರು: