ತೀರ್ಥವನು ಪಿಡಿದವರೆಲ್ಲ

ತೀರ್ಥವನು ಪಿಡಿದವರೆಲ್ಲ

ಬರೆದದ್ದು : ಕನಕದಾಸರು ರಾಗ : ಶಂಕರಾಭರಣ ತಾಳ : ಆದಿ ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ || ಪ || ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಅ || ಮೂಗುಪಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ ಭಾಗವತ ಶಾಸ್ತ್ರಗಳನೆಲ್ಲ ಓದಿ ಬಾಗಿ ಪರಸತಿಯರನು ಬಯಸಿ ಕಣ್ಣಿಡುವಂಥ ನೀತಿ ತಪ್ಪಿದರೆಲ್ಲ ದೇವ ಬ್ರಾಹ್ಮಣರೆ ? || ೧ || ಪಟ್ಟೆನಾಮವ ಬಳಿದು ಪಾತ್ರೆ ಕೈಯಲಿ ಪಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆ ಕೆಟ್ಟಕೂಗನು ಕೂಗಿ ಹೊಟ್ಟೆಯನು ಹೊರೆವಂಥ ಹೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? || ೨ || ಲಿಂಗಾಂಗದೊಳಗಿರುವ ಚಿನುಮಯವ ತಿಳಿಯದೆ ಅಂಗಲಿಂಗದ ನೆಲೆಯ ಗುರುತರಿಯದೆ ಜಂಗಮ ಸ್ಥಾವರದ ಹೊಲಬನರಿಯದ ಇಂಥ ಭಂಗಿ ಮುಕ್ಕುಗಳೆಲ್ಲ ಲಿಂಗವಂತರು ಅಹುದೆ ? || ೩ || ಅಲ್ಲಾ ಖುದಾ ಎಂದ ಅರ್ಥವನು ಅರಿಯದೆ ಮುಲ್ಲಾ ಶಾಸ್ತ್ರದ ನೆಲೆಯ ಗುರುತರಿಯದೆ ಕಳ್ಳಕೂಗನೆ ಕೂಗಿ ಬೊಗಳಿ ಬಾಯ್ದೆರೆವಂಥ ಕಳ್ಳರಿಗೆ ತಾ ವೀರಸ್ವರ್ಗ ದೊರಕುವುದೆ ? || ೪ || ವೇಷಭಾಷೆಯ ಕಲಿತು ಗೋಸನಿಯ ಕಡೆಗಿಟ್ಟು ಆಸೆಯನು ತೊರೆಯದೆ ತಪವ ಮಾಡಿ ವಾಸನೆಯ ಗುರುತಿನಾ ಹೊಲಬನರಿಯದ ಇಂಥ ವೇಷಧಾರಿಗಳು ಸನ್ಯಾಸಿಗಳು ಅಹುದೆ ? || ೫ || ಆರು ಚಕ್ರದನೆಲೆಯ ಅಷ್ಟಾಂಗ ಯೋಗದೊಳು ಮೂರು ಮೂರ್ತಿಯ ಮೂರು ಕಡೆ ನಿಲಿಸಿ ಕಾರುಣ್ಯನಿಧಿ ಕಾಗಿನೆಲೆಯಾದಿಕೇಶವನ ಸೇರಿ ಭಜಿಸಿದವರಿಗೆ ಯಮನ ಬಾಧೆಯುಂಟೆ || ೬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು