ತನ್ನ ಪ್ರಾಪ್ತಿಯ ಫಲವ ತಾನರಿಯದೆ
( ಮುಖಾರಿ ರಾಗ ಝಂಪೆ ತಾಳ)
ತನ್ನ ಪ್ರಾಪ್ತಿಯ ಫಲವ ತಾನರಿಯದೆ
ಇನ್ನು ನುಡಿವುದು ಮೂರ್ಖತನವಲ್ಲವೆ ||ಪ||
ಸರಸಿಜೋದ್ಭವನು ಫಣೆ*ಯೊಳು ಬರೆದು ನಿರ್ಮಿಸಿದ
ತೆರನೊಂದು ಬೇರುಂಟೆ ತಾನರಿಯದೆ
ಕರಕೊಂಡು ಕಂಡವರ ಕೂಡೆ ತಾನಾಡಿದರೆ
ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||೧||
ಬಡತನವು ಬಂದಲ್ಲಿ ಪೂರ್ವದಲಿ ತಾ ಮುನ್ನ
ಪಡೆದಂಥ ವಿಧಿ ಬೆನ್ನ ಬಿಡಲರಿವುದೆ
ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ
ಬಡತನವು ತಾ ಮುನ್ನ ಕಡೆಗೆ ತೊಲಗುವುದೆ ||೨||
ದೆಸೆಗೆಟ್ಟು ನಾಡದೈವಗಳಿಗೆ ಹಲುಬಿದಡೆ
ನೊಸಲ ಬರಹವ ತೊಡೆದು ತಿದ್ದಲಳವೆ
ವಸುಧೀಶ ಕಾಗಿನೆಲೆಯಾದಿಕೇಶವನಂಘ್ರಿ
ಬಿಸಜ**ವನು ಕಂಡು ನೀ ಸುಖಿಯಾಗು ಮನುಜ ||೩||
(*ಫಣೆ=ಹಣೆ , **ಬಿಸಜ=ಕಮಲ, ತಾವರೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments