Skip to main content

ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ

( ಮಾಯಾಮಾಳವಗೌಳ ರಾಗ ಅಟ್ಟತಾಳ)

ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ||ಪ||

ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ
ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ ||೧||

ಮಾತು ಮನಸು ಬಾರದವ್ವಾ ಸೋತೆವವ್ವಾ ಕೃಷ್ಣಗಾಗಿ
ಆತನ ಕಾಣದೆ ಮನ ಕಾತರಿಸುತಿದೆಯವ್ವಾ ||೨||

ಅನ್ನೋದಕ ಒಲ್ಲೆವವ್ವಾ ಕಣ್ಣಿಗೆ ನಿದ್ರೆ ಬಾರದು
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ||೩||

ಮನೆಮನೆ ವಾರುತೆಗೆ ಮನವೆಳಸದೆಯವ್ವಾ
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ ||೪||

ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ
ಗೋಪಜನರ ಕೂಡಿದ ಶ್ರೀಪತಿ ರಂಗವಿಠಲಾ ||೫||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: