ಕೇಶವನೊಲುಮೆಯು ಆಗುವ ತನಕ

ಕೇಶವನೊಲುಮೆಯು ಆಗುವ ತನಕ

---ರಾಗ ಶಂಕರಾಭರಣ ಆದಿತಾಳ ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆ ಕ್ಲೇಶಪಾಶಗಳ ಹರಿದು ವಿಲಾಸದಿ ದಾಸರ ನುತಿಗಳ ಪೊಗಳುತ ಮನದೊಳು ||ಪ|| ಮೋಸದಿ ಜೀವಿಯ ಘಾಸಿ ಮಾಡಿದ ಫಲ ಕಾಶಿಗೆ ಹೋದರೆ ಹೋದೀತೆ ದಾಸರ ಕರೆತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆ ಭಾಷೆಯ ಕೊಟ್ಟು ನಿರಾಸೆಯ ಮಾಡಿದ ಫಲ ಮೋಸವು ಮಾಡದೆ ಬಿಟ್ಟೀತೆ ಶಶಿವದನೆಯ ಅಧರಾಮೃತ ಸೇವಿಸಿ ಸುಧೆಯಿಂದೆಡೆ ನಿಜವಾದೀತೆ ||೧|| ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನ ಮನಸಿಗೆ ಸೊಗಸೀತೆ ಹೀನ ಮನುಜನಿಗೆ ಜ್ಞಾನವ ಬೋಧಿಸೆ ಹೀನ ವಿಷಯಗಳು ಹೋದೀತೆ ಮಾನಿನಿ ಮನಸು ನಿಧಾನವು ಇಲ್ಲದಿರೆ ಮನಾಭಿಮಾನ ಉಳಿದೀತೆ ಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ ||೨|| ಸತ್ಯದ ಧರ್ಮದ ನಿತ್ಯವು ಬೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ ತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆ ಪುತ್ಥಳಿ ಬೊಂಬೆಯು ಚಿತ್ರದಿ ಬರೆದಿರೆ ಮುತ್ತು ಕೊಟ್ಟರೆ ಮಾತಾಡೀತೆ ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯ ತೋರದೆ ಇದ್ದೀತೆ ||೩|| ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆ ತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆ ಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವು ಆಗದೆ ಬಿಟ್ಟೀತೆ ಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ ||೪|| ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆ ಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆ ಬದ್ಧ ಮನುಜ ಬಹು ಕ್ಷುದ್ರವ ಕಲಿತರೆ ಬುದ್ಧಿಹೀನನೆಂಬುದು ಹೋದೀತೆ ಕದ್ದು ಒಡಲ ತಾ ಪೊರೆವನ ಮನೆಯೊಳಗೆ ಇದ್ದುದು ಹೋಗದೆ ಇದ್ದೀತೆ ||೫|| ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರ ಬಗೆ ಸೊಗಸೀತೆ ಸಂಗಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆ ಇಂಗಿತವರಿಯದ ಸಂಗಶರೀರ ವಜ್ರಾಂಗಿಯಾಗದೆ ಇದ್ದೀತೆ ಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ ||೬|| ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆ ಕರಣಪಾಶದುರವಣೆ ತೊರೆದಾತಗೆ ಶರಣರ ಪದ್ಧತಿ ತಪ್ಪೀತೆ ಆರು ಶಾಸ್ತ್ರವನು ಮೀರಿದ ಯೋಗಿಗೆ ತಾರಕ ಬ್ರಹ್ಮವು ತಪ್ಪೀತೆ ವರದ ವೇಲಾಪುರ ಚೆನ್ನನ ಚರಣ ಸ್ಮರಿಸುವನಿಗೆ ಸುಖ ತಪ್ಪೀತೆ ||೭|| ---- ಯಾರು ಇದನ್ನು ರಚಿಸಿದವರು ? 'ವೇಲಾಪುರ ಚೆನ್ನ' - ಇದು ಯಾರ ಅಂಕಿತ ?
ದಾಸ ಸಾಹಿತ್ಯ ಪ್ರಕಾರ
ಬರೆದವರು