ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು
(ನೀಲಾಂಬರಿ ರಾಗ ರೂಪಕ ತಾಳ)
ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು
ಎಲ್ಲವನ್ನು ಉಂಡು ತೀರಿಸಬೇಕು ಮನವೆ ||ಪ||
ತಂದೆ ತಾಯಿಯ ಬಸಿರಿನಲ್ಲಿ ಬಂದ ಅಂದಂದಿಗೂ
ಒಂದಿಷ್ಟು ಸುಖವ ನಾ ಕಾಣೆ ಜೀವನವೆ
ಬಂದದ್ದನೆಲ್ಲವನ್ನು ಉಂಡು ತೀರಿಸಬೇಕು, ಭ್ರಮೆ-
ಯಿಂದ ಮನವೆ ನಿನಗೆ ಬಯಲಾಸೆ ಯಾಕೋ ||೧||
ಎಮ್ಮ ಅರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬ
ಹಮ್ಮು ನಿನಗೆ ಏಕೋ ಹಗೆಯ ಜೀವನವೆ
ಬ್ರಹ್ಮನು ಫಣೆಯಲ್ಲಿ ಬರೆದ ಬರಹ ತಪ್ಪುವುದುಂಟೆ
ಸುಮ್ಮನೆ ಬಯಲಾಸೆ ವ್ಯರ್ಥ ಜೀವನವೆ ||೨||
ಅಂತರಂಗದಲ್ಲೊಂದು ಅರ್ಧ ದೇಹದಲ್ಲೊಂದು
ಚಿಂತೆಗನುಗೊಳಲೇಕೆ ಪಂಚೈವರಿರಲು
ಕಂತುಪಿತ ಕಾಗಿನೆಲೆ ಆದಿಕೇಶವರಾಯ ಲಕ್ಷ್ಮೀ-
ಕಾಂತ ನಮ್ಮನಲ್ಲಿಗೆ ಕರೆಕಳುಹುವ ತನಕ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments