ಏನು ಬೇಡಲಿ ನಿನ್ನ ಬಳಿಗೆ ಬಂದು

ಏನು ಬೇಡಲಿ ನಿನ್ನ ಬಳಿಗೆ ಬಂದು

ಏನು ಬೇಡಲಿ ನಿನ್ನ ಬಳಿಗೆ ಬಂದು ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ || ಪ || ಜನನಿಯ ಕೊಡು ಎಂದು ಜಯವಂತ ಬೇಡುವೆನೆ ಜನನಿ ಏನಿತ್ತಳಾ ಧ್ರುವರಾಜಗೆ ಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ || ೧ || ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ ಅನುಜನೇನಿತ್ತನಾ ವಾಲಿಗೆ ಧನವನೇ ಕೊಡು ಎಂದು ದೈನ್ಯದಲಿ ಬೇಡುವೆನೆ ಧನ ಗಳಿಸಿದ ಸುಯೋಧನನೇನಾದ ಕೊನೆಗೆ || ೨ || ಸತಿಯಳ ಕೊಡು ಎಂದು ಮತಿವಂತ ಬೇಡುವೆನೆ ಸತಿಯಿಂದ ದುನ್ಯಾಮಕನೇನಾದ ಕೊನೆಗೆ ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ ಸುತರಿಂದ ಧೃತರಾಷ್ಟ್ರ ಗತಿಯೇನು ಕಂಡ || ೩ || ಬೇಡುವೆನು ನಾನಿಂದು ಬೇಡತಕ್ಕುದೆ ದೇವಾ ನೀಡೆನೆಂಬುದು ನಿನ್ನ ಮನದೊಳಿತ್ತೆ ಮೂಡಲಗಿರಿವಾಸ ಗೋಪಾಲವಿಠಲ ಪರರ ಬೇಡದಂತೆ ಎನ್ನ ಮಾಡಯ್ಯ ಹರಿಯೆ || ೪ ||
ದಾಸ ಸಾಹಿತ್ಯ ಪ್ರಕಾರ