Skip to main content

ಎಲ್ಯಾಡಿ ಬಂದ್ಯೋ ನೀ ಹೇಳಯ್ಯ

ರಾಗ: ರೇಗುಪ್ತಿ ತಾಳ: ಛಾಪ

ಎಲ್ಯಾಡಿ ಬಂದ್ಯೋ ನೀ ಹೇಳಯ್ಯ
ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ ||ಪ||

ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ
ಹೊಸಪರಿ ಸುದ್ದಿಯು ಹುಟ್ಟಿದೆ
ಪುಸಿಯಲ್ಲ ಈ ಮಾತು ನಿನ್ನ
ನಸುನಗೆ ಕೀರ್ತಿ ಹೆಚ್ಚಿದೆ

ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ
ಕೊರಳ ಪದಕವೆಲ್ಲಿ ನೀಗಿದೆ
ಸರಕೆಲ್ಲ ಅವಳಲ್ಲಿ ಸಾಗಿದೆ ಆ
ತರುಣಿ ಮಹಿಮೆ ಹೀಂಗಾಗಿದೆ

ಕಳ್ಳತನವ ಹೀಗೆ ಮಾಡಿದೆ ನಿನ್ನ
ಸುಳ್ಳು ಕಡೆಗೆ ನಾ ನೋಡಿದೆ
ಎಲ್ಲರಿಗೂ ಠಕ್ಕು ಮಾಡಿದೆ
ಚಲುವ ರಂಗವಿಠಲ ನಗೆಗೀಡಾದೆ

(ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಶ್ರೀಪಾದರಾಜ ಸಂಪುಟದಿಂದ)

ದಾಸ ಸಾಹಿತ್ಯ ಪ್ರಕಾರ: 
ಬಗೆ: 
ಬರೆದವರು: