ಈಶ ನಿನ್ನ ಚರಣ ಭಜನೆ

ಈಶ ನಿನ್ನ ಚರಣ ಭಜನೆ

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।। ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।। ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।। ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।।೪।। ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ।।೫।। ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।।೬।। ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।।೭।। ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।।೮।। ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।।೯।। ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।।೧೦।। ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।।೧೧।। ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।।೧೨।। ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।।೧೩।। ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।।೧೪।। ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।।೧೫।। ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।।೧೬।। ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।।೧೭।। ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।।೧೭।। ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।।೧೯।। ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।।೨೦।। ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।।೨೧।। ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।।೨೨।। ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।।೨೩।। ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।।೨೪।। ಸತ್ಯವಾದ ನಾಮಗಳನು । ನಿತ್ಯದಲ್ಲಿ ಭಜಿಸುವರಿಗೆ । ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ ।।೨೫।। ಮರೆಯದಲೆ ಹರಿಯ ನಾಮ । ಬರೆದು ಓದಿ ಪೇಳುವರಿಗೆ । ಕರೆದು ಮುಕ್ತಿ ಕೊಡುವನೆಲೆಯಾದಿಕೇಶವ ।।೨೬।। ---------------------------------------------------------------------------------------------- ಸಂಪದದಲ್ಲಿ ಶ್ರೀವತ್ಸ ಜೋಶಿಯವರು ಈ ಹಾಡನ್ನು ಸೇರಿಸಿದ್ದರು. ಕಡೆಯ ಎರಡು ಚರಣ ಸೇರಿಸಿ ಹಾಡನ್ನು ಹರಿದಾಸಕ್ಕೆ ಹಾಕಿದ್ದೇನೆ.
ದಾಸ ಸಾಹಿತ್ಯ ಪ್ರಕಾರ
ಬರೆದವರು