ಸುಮ್ಮನೆ ಕಾಲವ ಕಳೆವರೆ

ಸುಮ್ಮನೆ ಕಾಲವ ಕಳೆವರೆ

( ರಾಗ ಕಾಮವರ್ಧನಿ/ಪಂತುವರಾಳಿ ಅಟ ತಾಳ) ಸುಮ್ಮನೆ ಕಾಲವ ಕಳೆವರೆ, ಯಮ- ಧರ್ಮರಾಯನ ದೂತರೆಳೆಯರೆ ||ಪ|| ನರಿನಾಯಿ ಜನ್ಮದಿ ಬಾರದೆ, ಈ ನರಜನ್ಮದಲಿ ಬಂದು ಸೇರಿದೆ ಹರಿಯ ಸ್ಮರಣೆಯನು ಮಾಡದೆ, ಸುಮ್ಮ- ನಿರಲು ಪಾಪದ ವಿಷವೇರದೆ || ಬಾಲಕನಾಗಿದ್ದಾಗ ಬಹು ಲೀಲೆ, ಸ್ತ್ರೀ- ಲೋಲನಾಗಿ ಬಾಳಿದ ಮೇಲೆ ಮೂಳ ವೃದ್ಧಾಪ್ಯ ಬಂತಾಗಲೆ , ಮುಂದೆ ಬಾಳುವುದೆಲ್ಲ ನೂಲ ಮಾಲೆ || ಮಡದಿ ಮಕ್ಕಳ ಕೂಡಣ ಬಾಳು, ಬರಿದೆ ಒಡಲಿಗಾಗಿ ಚಿಂತನೆ ಕೇಳು ಬಿಡದೆ ಸಂಕೀರ್ತನೆ ಮಾಡೇಳು, ನೀ ನುಡಿವ ನುಡಿಗಳೆಲ್ಲವು ಬೀಳು || ಮನೆ ವಾರ್ತೆಯು ತರವಲ್ಲ, ಈ ಮನುಜರ ಪಾಡೇನು ಘನವಲ್ಲ ವನಜಸಂಭವಗೇ ನಿಶ್ಚಯವಿಲ್ಲ, ಮುಂದೆ ಹನುಮಂತ ಪಟ್ಟಕ್ಕೆ ಬಹನಲ್ಲ || ಇಂದಿನ ಹಮ್ಮು ನಾಳೆಗೆ ಇಲ್ಲ, ಭವ- ಬಂಧನದೊಳು ನೀನಿರೆ ಸಲ್ಲ ಮುಂದಿನ ಪರಿಯರಿತವನಲ್ಲ, ಮೃತ್ಯು ಬಂದಾಗ ಬಿಡಿಸಿಕೊಂಬುವರಿಲ್ಲ || ಕರಣಂಗಳಾವಾಗ ಜರಿವುದೊ, ತನ್ನ ಗರುವ ತನಗಾವಾಗ ಮುರಿವುದೊ ಹರಣ ತನ್ನಾವಾಗ ಮರೆವುದೊ, ಇನ್ನು ಮರಣ ಕೊನೆಗಾವಾಗ ಬರುವುದೊ || ಮರಣಕಾಲದಲಿ ಅಜಾಮಿಳನಾಗ, ತನ್ನ ತರಳ ನಾರಗನೆಂದು ಕರೆದಾಗ ಕರುಣದಿ ವೈಕುಂಠ ಪದವಾಗ, ಇತ್ತ ಪುರಂದರವಿಠಲನ ನೆನೆ ಬೇಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು