ಸಿಕ್ಕಿದೆಯೊ ಎಲೋ ಜೀವ

ಸಿಕ್ಕಿದೆಯೊ ಎಲೋ ಜೀವ

(ರಾಗ ಶಹಾನ. ಆದಿ ತಾಳ) ಸಿಕ್ಕಿದೆಯೊ ಎಲೋ ಜೀವ ಕುಕ್ಕಿ ಕೊಲ್ಲದೆ ಬಿಡರು ||ಪ|| ಸೊಕ್ಕಿದ ಹೆಣ್ಣಿಗೆ ನೀ ಮರುಳಾಗಿ ಉಕ್ಕಿನ ಕಂಭಕ್ಕೆ ನೀ ಗುರಿಯಾದೆ ||ಅ|| ಮನೆಮನೆ ತಪ್ಪದೆ ಶುನಕನಂದದಿ ಹೋಗಿ ಘನವಾದ ಕೂಳನೆ ತಿಂದು ತನುವು ಕೊಬ್ಬಿ ಇಲ್ಲಿಗೆ ಬಂದೆ || ಹಾಳುರೂಕೋಳಕ್ಕೆ ಕಾಲು ಚಾಚಿದ ಹಾಗೆ ಮೂಳ ಸಂಸಾರಕೆ ನೀ ಗುರಿಯಾಗಿ ತೇಲುತ್ತ ಮುಳುಗುತ್ತ ಇಲ್ಲಿಗೆ ಬಂದೆ || ಸುಣ್ಣವ ತಿಂದ ತಿ- ಮ್ಮಣ್ಣನಂದದಿ ಬೆದರಿ ಕಣ್ಣು ಕಾಣದೆ ನೀ ಕುಣಿದಾಡಿ ದೊಣ್ಣೆ ಪೆಟ್ಟಿಗೆ ನೀ ಗುರಿಯಾದೆ || ಕಂಡವರ ಒಡವೆಯನು ಬಡ್ಡಿಯ ಧನವನ್ನು ಕಂಡು ಕಾಣದೆ ನೀ ತಿಂದ್ಯಲ್ಲೊ ಮಿಂಡೇರ ಒಡನೆ ಮುಂಡೆಮಗನೆ || ಸತಿಸುತರೆಂಬುವರೆ ಗತಿಯೆಂದು ನಂಬಿದೆಲೊ ಯತಿಗಳತಿಥಿಗಳು ಬಂದರೆ ಮನೆಗೆ ಗತಿಯಿಲ್ಲವೆಂದು ಖತಿಗೊಂಬ್ಯಲ್ಲೊ || ಬಣ್ಣಿಸಲೆನ್ನಳವೆ ಅನುದಿನ ಪಾಪವ ಮಾಡಿ ಬೆಣ್ಣೆಯ ತಿಂದ ಬೆಕ್ಕಿನ ಹಾಗೆ ಕಣ್ಣು ಬಿಡುತ ಇಲ್ಲಿಗೆ ಬಂದೆ || ಗೋಪಾಲಕೃಷ್ಣಯ್ಯ ತಾಪತ್ರಯಂಗಳ ಕಳೆವ ಆಪತ್ತೆಲ್ಲ ಪರಿಹಾರ ಮಾಡುವ ಶ್ರೀಪತಿಪುರಂದರವಿಠಲನ ಭಜಿಸೆಲೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು