ಸರಿಯು ಮಿಗಿಲುಂಟೆ ಲೋಕದಲ್ಲಿ | ಹರಿದಾಸ ಸಾಹಿತ್ಯ ಸಂಪದ Skip to main content

ಸರಿಯು ಮಿಗಿಲುಂಟೆ ಲೋಕದಲ್ಲಿ

(ರಾಗ ಮುಖಾರಿ ಝಂಪೆತಾಳ)

ಸರಿಯು ಮಿಗಿಲುಂಟೆ ಲೋಕದಲ್ಲಿ
ಹರಿಭಕ್ತಿಯೆಂಬ ಮಾತೆಯ ಮಕ್ಕಳೆಲ್ಲರ್ಗೆ ||ಪ||

ಒಂದು ದೇಹವು ಎಂಬ ಮನೆಯೊಳಗೆ ಸರ್ವರೂ
ಬಂದು ಸಾಲಾಗಿ ಕುಳಿತಿರ್ದ ಬಳಿಕ
ಚಂದವಾದೈದಿಂದ್ರಿಯಂಗಳೆಂಬಂಗುಲಿಗ-
ಳಿಂದ ವಿಷಯಂಗಳನು ಉಂಡು ತೊಳೆದರ್ಗೆ ||೧||

ಮಡದಿ ಮಕ್ಕಳು ಎಂಬ ಹಾಳು ಗುಡಿಯನು ಸೇರಿ
ತಡೆಯದೇ ಚೆಂಡು ಬುಗುರಿಯನು ಆಡಿ
ಓಡಿ ಆಡುತ ಚಿಣ್ಣ ಕೋಲುಗಳನಾಡುತ್ತ
ದೂಡಿ ಸರ್ವಾಟದಿಂ ತೊಲಗಿದವರಿಂಗೆ ||೨||

ಆರುವೈರಿಗಳನ್ನು ಅರ್ತಿಯಿಂದಲಿ ಗೆದ್ದು
ಒರ್ವರೊರ್ವರು ಕೂಡಿ ಕುಣಿದಾಡುತ
ಸೇರಿ ಒಂದೇ ಮಾರ್ಗವನು ಬಿಡದೈತಪ್ಪ
ಧೀರ ವೈಕುಂಠಪತಿ ದಾಸರೆಲ್ಲರ್ಗೆ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: