ಶ್ರೀನಿಕೇತನ ಪಾಲಯ ಮಾಂ

( ರಾಗ - ಅರಭಿ(ದೇವಗಾಂಧಾರ) ಆದಿತಾಳ (ತೀನ್ ತಾಲ್) )

ಶ್ರೀನಿಕೇತನ ಪಾಲಯ ಮಾಂ , ಶ್ರೀನಿಕೇತನ ||ಪ||
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ-
ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ||

ಜ್ಞಾನಮಾನದಾ ಶರಣರ ಸುರ-
ಧೇನು ಸರ್ವದಾ
ನೀನೆಂದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ ||೧||

ಶ್ರೀಕರಾರ್ಚಿತ ಪಾದಾಬ್ಜ ಪ-
ರಾಕು ಅಚ್ಯುತ
ಶೋಕನಾಶನ ವಿಶೋಕಜನಕ ಹೃ-
ದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||೨||

ಪನ್ನಗಾಚಲನಿವಾಸ ಪ್ರ-
ಪನ್ನ ವತ್ಸಲ
ಬಿನ್ನಪ ಕೇಳೊ ಜಗನ್ನಾಥವಿಠ್ಠಲ
ಧನ್ಯನ ಮಾಡೊ ಶರಣ್ಯ ಶರಣನಾ ||೩||