ಭಾರತೀಶನೆ ಎನ್ನ

ಭಾರತೀಶನೆ ಎನ್ನ

( ರಾಗ ಮಧ್ಯಮಾವತಿ. ತ್ರಿಪುಟ ತಾಳ) ಭಾರತೀಶನೆ ಎನ್ನ ಭವಜನಿತ ದುಃಖವ ದೂರ ಮಾಡುತಿ ಘನ್ನ ಸನ್ನುತವರೇಣ್ಯ ||ಪ|| ವಾರವಾರದಿ ಭಜಿಪೆ ನಿನ್ನ ಮುರಾರಿ ವಾರಿಜ ಪದದಿ ಎನ ಮನ ಸೇರಿ ಶಾಂತದಿ ಮುಕುತಿ ಪದವನು ತೋರಿ ಪೊರೆ ಕರುಣಾಳು ಉತ್ತಮ ||ಅ|| ವಾಯುಸುತ ಹೇ ಧೀರ ಶ್ರೀ ರಾಮಕಿಂಕರ ರಾಯ ಮಹಾದುರ್ಧರ ಸದ್ಗುಣ ಕರುಣಾಂಬುಧಿ ಮಾಯ ದನುಜ ವಿದಾರ ಸುಚರಿತ್ರ ಶೂರ ತೋಯಜಾಂಬಕನಾ ಸತಿಯಳ ಖಳ ಗಾಯಕರು ಬಂದೊಯ್ಯೆ ಕಪಟದಿ ಜೀಯನೇ ವಾರಿಧಿಯ ಲಂಘಿಸಿ ಕಾಯಜನ ಪಡೆದಾಕೆಗುಂಗುರ ಈಯಲಿತ್ತಲಿ ವನದೊಳಿಹ ಖಳ ನಾಯಕರು ಬಂದ್ಹಿಡಿಯೆ ಅವರಾ ಕಾಯ ಖಂಡಿಸಿ ತಿರುಗಿ ದಶರಥ ಪ್ರಿಯನಿಗೆ ಸು-ಕ್ಷೇಮ ತಿಳುಹಿದ || ಕುರುಕುಲಾಂಬುಧಿಸೋಮ ಎಂದೆಣಿಸಿದನೆ ಮಹಾಗುರುಪರಾಕ್ರಮ ಭೀಮ ದ್ರೌಪದಿ ಮನೋಜಯ ಕರುಣವಾರಿಧಿಸೋಮ ರಣರಂಗಧಾಮ ದುರುಳ ದುರ್ಯೋದನನು ನಿಮ್ಮನು ಅರಗಿನ ಮನೆಯಲ್ಲಿ ಪೊಗಿಸಲು ಹಿರಿಯ ಧರ್ಮಾದಿಗಳ ಕೈಗೊಂಡ್ಹರುಷದಿಂದಲಿ ತೆರಳಿ ಬಂದ ವರಹಿಡಿಂಬಕ ಬಕಮುಖಾದ್ಯರ ತರಿದು ಯದುಕುಲಜಾತಕೃಷ್ಣನ ಪರಮಕಿಂಕರನಾಗಿ ಸತತದಿ ಮೆರೆವ ಪಾಂಡವಜಾತಖ್ಯಾತ || ಮಧ್ಯ ಗೇಹನೊಳುದಿಸಿ ವರವೀರವೈಷ್ಣವ ಪದ್ಧತಿಗಳನುಸರಿಸಿ ಮಾಯ್ಗಳ ಕುಭಾಷ್ಯವ ಗೆದ್ದು ಗುರುವೆಂದೆನಿಸಿ ಮಧ್ವಾಖ್ಯನೆನಿಸಿ ಸಿದ್ಧ ಮೂರುತಿ ಹರಿಯನುಗ್ರಹ ಬದ್ಧರಾದ ಜನಕೆ ಭೇದವ ತಿದ್ದಿ ತಿಳುಹಿದ ಮುನಿವರೇಂದ್ರ ಪ್ರಸಿದ್ಧವಾದಾಪರಾಜಿತನೆ ಎ- ನ್ನುದ್ಧರಿಸುತ ಚೆಂದದಲಿ ಪ್ರಸಿದ್ಧ ಮೌನಿ ಗಿರಿಯಲಿ ನಿಂದಿಹ ಮಧ್ವಪತಿ ಪುರಂದರವಿಠಲ ದೂತ ಮುದ್ದು ಪ್ಲವಗಾಧಿಪರ ಶೇಖರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು