Skip to main content

ಭಂಡನಾದೆನು ನಾನು ಸಂಸಾರದಿ

(ರಾಗ ಮುಖಾರಿ ಝಂಪೆತಾಳ)

ಭಂಡನಾದೆನು ನಾನು ಸಂಸಾರದಿ
ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ||ಪ||

ಕಂಡಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತೈ
ಪುಂಡರೀಕಾಕ್ಷ ನೀ ಕರುಣಿಸೈ ಬೇಗ ||೧||

ನಾನಾ ವ್ರತಂಗಳನು ನಾ ಮಾಡಿ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವು
ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ
ನೀನಾದರೂ ಕೃಪೆಯ ಇಡು ಬೇಗ ಹರಿಯೆ ||೨||

ಬುದ್ಧಿಹೀನರ ಮಾತು ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟು ಹೋಯ್ತು
ಸಿದ್ಧನುತ ಸಿರಿಪುರಂದರವಿಠ್ಠಲ ತತ್ಪದ-
ಸಿದ್ಧಿಯನು ದಯಗೈದು ಉಳುಹು ನೀ ಎನ್ನ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: