ನೀನೇ ಬಲ್ಲಿದನೋ

ನೀನೇ ಬಲ್ಲಿದನೋ

(ರಾಗ ಶಂಕರಾಭರಣ ಅಟತಾಳ ) ನೀನೇ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೊ ||ಪ|| ನಾನಾ ತೆರದಿ ನಿಧಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ ||ಅ|| ಜಲಜಭವಾಂಡಕ್ಕೆ ಒಡೆಯ ನೀನೆನಿಸುವೆ ಬಲು ದೊಡ್ಡವನು ನೀನಹುದೊ ಅಲಸದೆ ಹಗಲಿರುಳೆನ್ನದೆ ಅನುದಿನ ಒಲಿದು ಬಲಿಯ ಮನೆಬಾಗಿಲ ಕಾಯ್ದ ಮೇಲೆ || ಖ್ಯಾತಿಯಿಂದಲಿ ಪುರುಹೂತಸಹಿತಸುರ ವ್ರಾತವು ನಿನ್ನನು ಓಲೈಸಲು ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ ಪಾರ್ಥನ ರಥಕೆ ಸುತನಾದ ಮೇಲೆ || ಪರಮಪುರುಷ ಪರಬೊಮ್ಮ ನೀನೆನುತಲಿ ನಿರತ ಶ್ರುತಿಯು ಕೊಂಡಾಡುತಿರೆ ವರಪಾಂಡವರ ಮನೆಯೂಳಿಗ ಮಾಡ್ಯವರು ಕರೆಕರೆದೆಲ್ಲಿಗೆ ಪೋಗಿ ಕಾಯ್ದ ಮೇಲೆ || ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನ ಸಂ- ಹರಿಪೆನೆನುತ ಚಕ್ರ ಝಳಪಿಸುತ ಭರದಿಂದ ಬರಲಲ್ಲಿ ಹರಿನಾಮ ಬಲವಿರೆ ಪರಿಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ || ತರಳ ಕರೆಯಲು ನೀ ತ್ವರಿತದಿ ಕಂಭದಿ ಬಂದು ನರಮೃಗ ರೂಪದಿಂದವನ ಕಾಯ್ದೆ ವರಗಳೀವ ಪುರಂದರವಿಠಲ ನಿನ್ನ ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು