ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ

ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ

(ರಾಗ ಮೋಹನ ಅಟ ತಾಳ ) ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ, ಕರುಣಾಕರನಲ್ಲವೆ, ರಂಗ ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ ||ಪ|| ಭಕ್ತವತ್ಸಲವಲ್ಲವೆ ರಂಗ ಬಲು ಭಾಗ್ಯವಂತನಲ್ಲವೆ ಅತ್ಯಪರಾಧಿ ನಾನಾದರೇನಯ್ಯ ಇತ್ತ ಬಾರೆನ್ನಬಾರದೆ || ಬಡವರಾಧಾರನಲ್ಲವೆ ರಂಗ ಕಡು ಭಾಗ್ಯ ಉಳ್ಳವನಲ್ಲವೆ ಕಡು ಪಾಪಿಯು ನಾನಾದರೇನಯ್ಯ ಕಡೆಗೆ ಬಾರೆನ್ನಬಾರದೆ || ಶೂರತ್ವವುಳ್ಳವನಲ್ಲವೆ ರಂಗ ಸುಲಭರ ಅರಸನಲ್ಲವೆ ಯಾರು ಇಲ್ಲದ ಪರದೇಶಿ ನಾನಾದರೆ ಸಾರಿ ಬಾರೆನ್ನಬಾರದೆ || ಬೇಲೂರ ಚೆನ್ನಿಗ ನೀನಲ್ಲವೆ ರಂಗ ತುಡುಗಾಯುನುಳ್ಳವನಲ್ಲವೆ ಹಲವು ಚಿಂತೆ ಎನಗಾದರೆ ನೆಲೆಗೆ ಬಾರೆನ್ನಬಾರದೆ || ದೋಷಿಗ ನಾನಾದರೇನಯ್ಯ ರಂಗ ದೋಷರಹಿತ ನೀನಲ್ಲವೆ ವಾಸಿಯಿಂದಲಿ ನೀ ಸಲಹೊ ಎನ್ನ ವಾಸುಕಿಶಯನ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು