ನಿನ್ನ ನಾಮವೆ ಎನಗೆ ಅಮೃತಾನ್ನವು

ನಿನ್ನ ನಾಮವೆ ಎನಗೆ ಅಮೃತಾನ್ನವು

(ರಾಗ ಕೇದಾರಗೌಳ ಅಟತಾಳ ) ನಿನ್ನ ನಾಮವೆ ಎನಗೆ ಅಮೃತಾನ್ನವು ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ|| ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ ಶಂಖಪಾಣಿಯ ನಾಮ ಶಾಕಾದಿ ಸೂಪ ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು || ಕೇಶವನೆಂಬ ನಾಮ ಕರಿದ ಹೂರಣ ಕಡುಬು ವಾಸುದೇವನ ನಾಮ ವಡೆ ಶ್ಯಾವಿಗೆ ಸಾಸಿರವೆಂಬ ನಾಮ ಶಾವಿಗೆ ಪರಮಾನ್ನ ದೋಷದೂರನ ನಾಮ ಸೂಸಲ ಕಡುಬು || ನಾರಾಯಣ ನಿನ್ನ ನಾಮ ನೊರೆ ಹಾಲು ಸಕ್ಕರೆ ಶ್ರೀರಾಮನಾಮ ಸರವಳಿಗೆ ಸಜ್ಜಿಗೆ ಕಾರುಣ್ಯನಿಧಿ ನಾಮ ಕರಿದ ಹಪ್ಪಳ ಸಂಡಿಗೆ ಪಾರಾಯಣ ನಾಮ ಪರಿಪರಿಯ ಪರಮಾನ್ನ || ಯದುಪತಿಯೆಂಬ ನಾಮ ಎಣ್ಹೋಳಿಗೆ ರಾಶಿ ಮಧುಸೂದನನೆಂಬ ನಾಮ ಮಂಡಿಗೆಯು ಚತುರ ಗೋವಳ ನಾಮ ಚೆಲುವ ಬಿಸೂರಿಗೆ ಪದುಮನಾಭ ನಿನ್ನ ನಾಮ ಪರಿ ಪರಿಯ ಭಕ್ಷ್ಯ || ದೇವಕೀಸುತ ನಾಮ ದಧ್ಯನ್ನದ ಮುದ್ದೆ ಗೋವಿಂದನ ನಾಮ ಗುಳ್ಳೋರಿಗೆ ಮಾವಮರ್ದನ ನಾಮ ಕಲಸುಮೇಲೋಗರ ರಾವಣಾರಿಯ ನಾಮ ದೋಸೆ ಸುಕ್ಕಿನುಂಡೆ || ಗರುಡವಾಹನ ನಾಮ ಘೃತ ಪಯೋದಧಿ ತಕ್ರ ಪರಮಪುರುಷನ ನಾಮ ಪನ್ನೀರು ಪಾನ ಕರಿವರದ ನಿನ್ನ ನಾಮ ಕರ್ಪೂರದ ವೀಳ್ಯ ಶರಧಿಶಯನ ನಾಮ ಶಯನಪರ್ಯಂಕ || ಈ ಪರಿಲಿ ನಾಮಾವಳಿಯನು ನೆರೆ ಸವಿದುಂಬೆ ಆಪತ್ತು ಬಿಡಿಸೆನ್ನ ಕ್ಷುಧೆಯ ನೂಕಿ ಗೋಪಾಲ ಉರಗಾದ್ರಿ ಪುರಂದರ ವಿಠಲನೆ ಶ್ರೀಪಾದ ನಂಬಿ ಅಪವರ್ಗವ ಸೇರುವೆ || ( ಸೂಪ =ಸಾರು, ತೊವ್ವೆ , ಅಡಿಗೆಯವ ಸೂಪಕಾರ = ಅಡಿಗೆಯವ )
ದಾಸ ಸಾಹಿತ್ಯ ಪ್ರಕಾರ
ಬರೆದವರು