ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ

ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ

(ರಾಗ ಕಾಂಭೋಜ ಅಟತಾಳ) ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ ||ಪ|| ಕೇಡಿಗನು ಇವ ನಮ್ಮ ಕೆಲಸ ಕೆಡಿಸುವನೆಂದು ||ಅ|| ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನೆಂದು ಅನ್ನಿಗರ ಬಿಡುವನೆ ಎಂದೆಲ್ಲರ್ ಮಾತಾಡಿಕೊಂಡು || ಹಸಿದಳುತಿರೆ ನೇವರಿಸಿ ಮೊಲೆಯೂಡಿದವಳ ಅಸು ಹೀರಿ ಕೊಂದ ಮಾರಿ ಮಗನೆಂದು ರಂಗ ನಿನ್ನ || ಆವು ಕಾಯಲು ಹೋಗಿ ಹಾವಿನ ಮಡು ಧುಮುಕಿ ಠಾವು ಬಿಡಿಸಿದವ ಕೇವಲ ಹೀನನೆಂದು || ಗೊಲ್ಲತೇರ ಮನೆಯಲ್ಲಿ ಪಾಲು ಮೊಸರು ಬೆಣ್ಣೆಯ ನಿಲ್ಲದೆ ಮೆಲ್ಲುವನು ಕಳ್ಳನೆಂತೆಂದು ನಿನ್ನ || ತರಳ ಪುಟ್ಟನು ಎಂದು ಕರುಣದಿ ಸಲಹಿದವರ ಬೆರಳೆಣಿಸಿ ಕೊಂದನಿವ ಪರಮಾ ಕಿತವನೆಂದು ||೫|| ಸುಲಭದಿಂದಲಿ ಬಲು ಖಳರ ಬಳಗವನೆಲ್ಲ ಛಲದಿಂದ ಕೊಂದನಿವ ಕೊಲೆಗಾರ ರಂಗನೆಂದು || ಕರುಣಾನಿಧಿಯೆ ಗುರು ಪುರಂದರವಿಠಲ ಧರೆಯ ಮಾನವರು ನಿನ್ನ ಚರಿಯ ಈ ಪರಿಯೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು