ಕಾವ ದೇವ ನೀನಲ್ಲದೆ

ಕಾವ ದೇವ ನೀನಲ್ಲದೆ

(ರಾಗ ಮಧ್ಯಮಾವತಿ ಆದಿತಾಳ) ಕಾವ ದೇವ ನೀನಲ್ಲದೆ ಜಗಕೆ ಇನ್ನಾವ ದೇವರುಳ್ಳರೈ ||ಪ|| ದೇವರ ದೇವ ನೀನೆಂದು ನಂಬಿದೆನೆನ್ನ ಕಾಯೊ ಕನಕಾಚಲ ಕೃಷ್ಣ ಕರುಣದಿ || ಅ|| ತಂದೆಯ ತೊಡೆಯ ಮೇಲೆ ಬಂದು ಕುಳಿತಿದ್ದ ಕಂದನ ಮಲತಾಯಿಯು ನೂಕಲು ಅಂದು ಶಿಶುವು ಅಡವಿಗೆ ನಡೆತರಲು ಬಂದು ಪೊರೆದೆಯೋ ನೀ ಕರುಣದಲಿ || ನಖಮುಖದಲಿ ಹಿರಣ್ಯಕನೊಡಲನು ಸೀಳಿ ರಕುತವ ದೆಸೆದೆಸೆಗೆ ಚೆಲ್ಲಲು ಸಕಲ ಸುರರು ಕೊಂಡಾಡಲು ಜಯವೆಂದು ಭಕುತ ಪ್ರಹ್ಲಾದನ ಪೊರೆದೆ ಕರುಣದಿ || ಶಕಟ ಪೂತನಿ ಧೇನುಕ ವತ್ಸಾಸುರ ಬಕಮುಖ್ಯರನೆಲ್ಲ ಸವರಿದೆಯೊ ಪ್ರಕಟತನದಿ ಕಂಸನ ನೆಗ್ಗೊತ್ತಿ ದೆ- ವಕಿ ವಸುದೇವರ ಪೊರೆದೆ ಕರುಣದಿ || ಅತಿಚಪಲದಿ ದುಶ್ಶಾಸನ ಸಭೆಯಲಿ ಪತಿಗಳೈವರು ಎದುರಿನೊಳಿರಲು ಖತಿಯಿಂದಲಿ ಸೆಳೆಯೆ ಸೀರೆಯ ತರಳೆ ದ್ರೌ- ಪದಿಯಭಿಮಾನವ ಪೊರೆದೆ ಕರುಣದಿ || ಮರಣಕಾಲದಲಿ ಅಜಮಿಳ ಮರುಕದಿ ತರಳ ನಾರಗನೆಂದು ಕರೆಯಲು ನೆರೆದೆ ಪೊರೆದೆ ಕರುಣಾಳುಗಳರಸನೆ ಗುರುಪುರಂದರವಿಟ್ಠಲ ಕರುಣದಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು