Skip to main content

ಏನು ಪೇಳಲೆ ಗೋಪಿ

( ರಾಗ ಆನಂದಭೈರವಿ. ಛಾಪು ತಾಳ)

ಏನು ಪೇಳಲೆ ಗೋಪಿ ನಿನ್ನ ಮಗನ ಜಾಲ
ಮಾನ ತಪ್ಪಿ ಬಂದ ಮನೆಯೊಳಗೆ ||ಪ||

ಕೊಡ ಹಾಲು ಕುಡಿದನೆ ಗಡಿಗೆಯನೊಡೆದನೆ
ಅಡಗಿದ್ದನೆ ದೊಡ್ಡ ಕೊಡದೊಳಗೆ
ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ
ಬಡವರ ಮಗನೇನೆ ಹೊಡೆಯಲಿಕ್ಕೆ ||

ಅಳಿಯನ ವೇಷದಿ ಮಗಳ ಕರೆಯ ಬಂದ
ಕಲಹ ಮಾಡಿ ತಾ ಕಳಿಸೆಂದ
ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ ||

ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ
ಪುಟ್ಟಿಸಬೇಡಿರೆ ಅನ್ಯಾಯವ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ
ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: