ಇತ್ತತ್ತು ಓಡಿ ನೀ ಘಾಸಿಪಡಲು ಬೇಡ

ಇತ್ತತ್ತು ಓಡಿ ನೀ ಘಾಸಿಪಡಲು ಬೇಡ

( ರಾಗ ಭೂರಿಕಲ್ಯಾಣಿ ಅಟತಾಳ ) ಇತ್ತತ್ತು ಓಡಿ ನೀ ಘಾಸಿಪಡಲು ಬೇಡ ಎತ್ತೂ ಇಹನು ಕೃಷ್ಣನು ||ಪ|| ಶುದ್ಧಮನದಿಂದ ಇದ್ದ ಎಡೆಯಲಿ ಬುದ್ಧಿಯ ಅವನಲಿ ನಿಲ್ಲಿಸಬೇಕಯ್ಯ ||ಅ|| ಒಡಲೆಂಬ ಮನೆಯಲ್ಲಿ ನೀನು ಇರುತಿರ್ದಿ ಕಡಲಶಯನ ಕೃಷ್ಣನು ಒಡಗೂಡಿ ಮರುತನ್ನ ಮಾಯವ ಮುಂದಿದ್ದು ತಟಿಯಂತೆ ಪೊಳೆಯುವ ನಿನ್ನ ಎದುರಾಗಿ || ಒಂದೆ ಮನದಲಿ ನೆನೆಯಲು ಹೋಗೋದು ಹಿಂದಿನ ದುಷ್ಕರ್ಮವು ಸಂದೇಹ ಬೇಡಯ್ಯ ಇರುಳು ಓಡುವುದು ಚೆನ್ನಾಗಿ ಜ್ಯೋತಿಯ ಒಳಗೆ ತೋರುವುದು || ನಾರಾಯಣ ಮುನಿವಂದ್ಯ ನಾರಾಯಣನೆಂದು ನಾರಿ ದ್ರೌಪದಿಯಳ ಧೀರ ಪ್ರಹ್ಲಾದಗೆ ತೋರಿದ ಬಗೆಯೆಲ್ಲ ಸಾರಿ ತಿಳಿಯಬೇಕಣ್ಣ || ಸ್ನಾನ ಮಾಡಲು ಒಲಿಯ, ದಾನ ಮಾಡಲು ಒಲಿಯ ಮೌನ ಮಂತ್ರಗಳಿಗೆ ಒಲಿಯ ದೀನರಕ್ಷಕಸ್ವಾಮಿ ಮಾನದಿಂ ಸಲಹುವ ಧೇನಿಪ ಸುಜನರನ್ನ || ಕಾಶಿಯಾತ್ರೆಯು ಬೇಡ ಕಾಸು ಕಳೆಯಬೇಡ ಮೋಸ ಹೋಗದೆ ನೆನೆಯಣ್ಣ ದೋಷರಹಿತ ತಂದೆ ಪುರಂದರವಿಠಲನ ಸಾಸಿರ ನಾಮವನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು