Skip to main content

ಆಟವಾಡಬೇಕು ಒಳ್ಳೇ ಊಟ ಮಾಡಬೇಕು

ಆಟವಾಡಬೇಕು ಒಳ್ಳೇ ಊಟ ಮಾಡಬೇಕು ||ಪ||
ಆಟ ಬಲ್ಲ ಮಾನವನಿಗೆ ರೋಗದ
ಕಾಟವಿರದೆ ತಾ ಊಟ ಮಾಡುವನು ||ಅ||

ಪಂಡಿತರಾಗಿ ಅಖಂಡ ಕಲೆಗಳನು
ಚಂಡಿನಂತೆ ಕರತಲದಲಿ ಪಿಡಿಯುತ ||೧||

ಕಣ್ಣಮುಚ್ಚಿ ಇಂದ್ರಿಯಗಳ ನಿಲ್ಲಿಸಿ
ಹೃನ್ಮಂದಿರದಲಿ ಹರಿಯನು ಹಿಡಿಯುವ ||೨||

ಈತ ಜೀವ ಜಡರೆಂಬೊ ಮೂವರಲಿ
ಈಶನೆ ಹಾಸೆಂದರಿಯುತ ಮೂರೆಲೆ ||೩||

ಹಿಂದಿನ ದಿನ ಹರಿದಿನ ಮರುದಿನಗಳು
ಇಂದಿರೆಯರಸನ ಕೂಡಿ ಏಕಾದಶಿ ||೪||

ಸಿಕ್ಕಿದ ಸ್ಥಾನವು ದಕ್ಕದೆಂಬುದಕೆ
ಭಕ್ತ ಪ್ರಸನ್ನ ತೋರಿದ ಕೊಕ್ಕಿನ ||೫||

----ವಿದ್ಯಾಪ್ರಸನ್ನತೀರ್ಥರು




 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: