ಮರುತ ನಿನ್ನಯ ಮಹಿಮೆ
ಶ್ರೀರಾಘವೇಂದ್ರರಿಂದ ವಿರಚಿತವಾದ ವಾಯುದೇವರ ಅವತಾರತ್ರಯ ಸುಳಾದಿ
ಧ್ರುವತಾಳ
ಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು |
ಚರಿಸಿದ ಮನುಜನಿಗೆ ದುರಿತಬಾಧೆಗಳ್ಯಾಕೆ |
ಸರಸಿಜಾಸನಸಮ ಶಿರಿದೇವಿ ಗುರುವೆಂದು |
ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ |
ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |
ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ|
ಸರಿಬಂದ ವ್ಯಾಪಾರದಿ ಆಡಿಸುವೆ ಜಡಜೀವರನು |
ಪುರಹರ ಮೊದಲಾಗಿ ತೃಣಜೀವಕಡೆಯಾಗಿ|
ಅರಿಯರು ಒಂದು ಕಾರ್ಯ ಗುರುವೆ ನಿನ್ನಯ ಹೊರತು |
ಹೊರಗೆ ಗೊಂಬೆಗಳತೋರಿ ಒಳಗೆ ಥರಥರದಿ ನೀನು|
ಇರುವೆ ಸರ್ವರಿಗೆ ಆಧಾರರೂಪದಿ ಅತಿ |
ಸ್ಥಿರ ಭಕುತಿಯಿಂದ ಹರಿಯಧೇನಿಸುತ |
ಮಿರುಗುವ ಪ್ರಭೆನಿನ್ನದು |
ಬರುವ ಹೋಗುವ ವ್ಯಾಪಾರ ನಿನ್ನದು ದೇವ |
ಭರದಿ ಶರಧಿಶಯನ ಶಿರಿವೇಣುಗೋಪಾಲರೇಯ |
ಪರಮಹರುಷದಿ ಲೀಲಾತೋರುವ ನಿನ್ನೊಳಿದ್ದು ||೧||
ಮಟ್ಟತಾಳ
ಅಖಿಲಾಗಮವೇದ್ಯ |
ಅಖಿಲಾಗಮಸ್ತುತ್ಯ |
ಅಖಿಲಾಗಮನಿಗಮ |
ವ್ಯಾಪುತದೇವನೆ |
ಅಖಿಲರೊಳಗೆ ನಿಂದೆ ಸಕಲ ಕಾರ್ಯಗಳೆಲ್ಲ |
ಅಕುಟಿಲ ನಿನ್ನಾಗಿ |
ಮಾಡಿಸಿ ಮೋದದಿಂದ |
ಯುಕುತಿಯಿಂದ ಜಗವ ಅತಿಶಯವ ತಿಳಿದು |
ಲಕುಮಿಯನು |
ನೀನು ಕಾಣುವೆ ಸರ್ವದಾ |
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು |
ಭಕುತಿಗಭಿಮಾನಿ ಭಾರತಿಗಳವಲ್ಲ |
ಭೃಕುಟಿವಂದಿತ ನೀನು ವೇಣುಗೋಪಾಲನ |
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು ||೨||
ತ್ರಿಪುಟತಾಳ
ಪೃಥ್ವಿಶಬ್ದದಿ ಭೂತಮಾತ್ರಾ ಪರಿಣಾಮಗಳಲ್ಲಿ |
ಪ್ರತಿಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ |
ಕೃತವಿಡಿದು ಸಕಲ ವ್ಯಾಪ್ತಿ ತಾತ್ವಿಕರಲ್ಲಿ ವ್ಯಾಪಾರ |
ನಿನ್ನದಯ್ಯ ಲೋಕವಂದಿತ ದೇವ |
ಶಾತಕುಂಭದಿಯಿಂದ ಬೊಮ್ಮಾಂಡವು ತಾಳ |
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ |
ಕಾಂತನಾದ ಶಿರಿ ವೇಣುಗೋಪಾಲನ |
ಪ್ರಿತಿಯಿಂದಲೆ ನಿನಗೆ ಒಲಿದೆ ಅಧಿಕನಾಗಿ ||೩||
ಅಟ್ಟತಾಳ
ಇರುತಿ ಎಲ್ಲ ಜಗದಾಧಾರಕನಾಗಿ |
ಇರಿತಿದ್ದ ಧಾರುಣಿಯೋಳಗೆ |
ಮೂರು ಅವತಾರಗಳು ಧರಿಸಿ |
ಕ್ರೂರರ ಸದೆದ್ದು ಮೀರಿದ ಕಾರ್ಯವೆ |
ಮೇರುನುಂಗುವವನಿಗೆ ಒಂದುಚೂರು ನುಂಗಲು |
ಶೂರತನವು ಏನು ಆರು ಬಣ್ಣುಪರೋ ವಿ|
ಚಾರಿಸಿ ನಿನ್ನನು ನಾರಾಯಣಕೃಷ್ಣ ವೇಣುಗೋಪಾಲನಾ|
ಧಾರ ದಿಂದಲಿ ಸೇವೆ ಬಾರಿಬಾರಿಗೆ ಮಾಳ್ಪೆ ||೪||
ಆದಿತಾಳ
ಒಂದು ಅವತಾರದಲಿ ಕೊಂದೆ ರಕ್ಕಸರ ಮತ್ತೊಂದು ಅವತಾರದಿ ಅಸುರವೃಂದ ಘಾತಿಸಿದೆ |
ನಂದ ತೀರಥರೂಪದಿಂದ ಸಕಲರಂದ ವಚನಗಳಕಡಿದು |
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳನು ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತದ್ವೀಪ |
ಸಿಂಧು ಸಪುತ ಏಕದಿಂದ ಹಾರುವನು |
ಮುಂದಿದ್ದ ಕಾಲಿವೆಯನಿಂದ ನಿಂದು ತಾ ದಾಟಿದಂತೆ ಮಂದಮತಿಗಳು ಮನಕೆ ಏನೆಂದೆ ಎಲೋ ದೇವ |
ಸುಂದರಾಂಗನೆ ಸುಖದಿಂದ ಪೂರಿತ ವಾಯುನಂದನ ಹನುಮ ರಾಮನಿಂದಾಲಿಂಗನ ಪಡೆದ |
ಬಂದು ವಂದಿಸಿದ ಗೋಪಿಕಂದಗೆ ಭೀಮ |
ನಂದಮೂರುತಿ ವ್ಯಾಸನಿಂದ ತತ್ತ್ವಗಳೆಲ್ಲ |
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ |
ತಂದೆ ಎನ್ನ ಬಿನ್ನಹ ಒಂದು ಲಾಲಿಸುವದು |
ಪೊಂದಿಭೂಪತಿಯ ಮನದಿಚ್ಚೆ ಬೇಡಿದಂತೆ |
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ |
ಕುಂದದೆ ಎನ್ನಳಿಪ್ಪ ಮಂದಮತಿ ಕಳೆವಾದೆಂದು |
ಇಂದೀವರಾಕ್ಷ ಹೃದಯಮಂದರಿದೊಳು ನಿನ್ನ |
ಅಂದವಾದ ರೂಪ ಇಂದು ತೋರುವದೆನೆಗೆ |
ಸಿಂಧುಶಯನ ಶಿರಿವೇಣುಗೋಪಾಲನು |
ನಿಂದ ನಿನೋಳು ಲೀಲಾ ಒಂದೊಂದು ಮಾಳ್ಪ ಚಿತ್ರ ||೫||
ಜತೆ - ಪವನನಿನ್ನಯ ಪಾದ ಪೊಂದಿದ ಮನುಜನು|
ಜವನಪುರಕ್ಕೆ ಸಲ್ಲ ವೇಣುಗೋಪಾಲನು ಬಲ್ಲ ||೬||
ಕೃಪೆ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವೆಬ್ ಸೈಟ್
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
Re: ಮರುತ ನಿನ್ನಯ ಮಹಿಮೆ