ವ್ಯರ್ಥವಲ್ಲವೆ ಜನುಮ
( ರಾಗ ಪೂರ್ವಿ ಆದಿತಾಳ)
ವ್ಯರ್ಥವಲ್ಲವೆ ಜನುಮ ವ್ಯರ್ಥವಲ್ಲವೇ ||ಪ||
ತೀರ್ಥಪದನ ಭಜಿಸಿ ಕೃತಾರ್ಥನಾಗದವನ ಜನುಮ ||ಅ||
ಮುಗುಳುನಗೆ ಎಳೆತುಳಸಿದಳಗಳನು ಬಲು ಪ್ರೇಮದಿಂದ
ಜಗನ್ಮಯಗರ್ಪಿಸಿ ಕೈಯ ಮುಗಿದು ಸ್ತುತಿಸದವನ ಜನುಮ ||
ಸ್ನಾನ ಸಂಧ್ಯಾನದಿಂದ ಮೌನಮಂತ್ರ ಜಪಗಳಿಂದ
ಧ್ಯಾನದಿಂದ ತಂತ್ರಸಾರ ಹೀನನಾದವನ ಜನುಮ ||
ಶೋಡಷೋಪಚಾರದಿಂದ ನೋಡಿ ರಂಗನ ಪೂಜೆ ಮಾಡಿ
ಕೂಡಿ ಭಜಿಸಿ ಕುಣಿದು ಕೊಂಡಾಡಿ ಪಾಡದವನ ಜನುಮ ||
ಭೋಗಿಶಯನನ ದಿನದಿ ವಿಹಿತ ಭೋಗಂಗಳನೆ ತೊರೆದು ಪರಮ
ಭಾಗವತರ ಮೇಳದೊಳಗೆ ಜಾಗರದಿಂದಿರದವನ ||
ದಾಸರೊಡನೆ ಆಡದವನ ದಾಸರ ಕೂಡೆ ಪಾಡದವನ
ದಾಸರ ಕೊಂಡಾಡದವನ ದಾಸತ್ವ ಪೊಂದದವನ ||
ಹರಿಯ ಗುಣವೆಣಿಸದವನ ಹರಿಯ ಸ್ಮರಣೆಯಿಲ್ಲದವನ
ಹರಿಯ ಕೊಂಡಾಡದವನ ಹರಿಯ ನಂಬದವನ ಜನುಮ ||
ನಗುವರೆಂಬ ಭಾವವಡಗಿ ಜಿಗಿದು ಕುಣಿದು ಮೈಯು ಪುಳಕಿ
ಬಿಗಿದು ಪರವಶತ್ವದಿಂದ ಪೊಗಳಿ ನಲಿಯದವನ ಜನುಮ ||
ಸರ್ವಧರ್ಮ ಸರ್ವಯಜ್ಞ ಸರ್ವತೀರ್ಥಯಾತ್ರೆಗಳನು
ಸರ್ವದಾನ ವಸ್ತ್ರಗಳನ್ನು ಸರ್ವ ವರ್ತಿಸದವನ ಜನುಮ ||
ಭಂಗುರವಾದಂಥ ದೇಹ ಮಂಗಳಾತ್ಮಕನಾದ ಶ್ರೀ-
ರಂಗಪುರಂದರವಿಠಲ ಪಶ್ಚಿಮ ರಂಗಗರ್ಪಿಸದವನ ಜನುಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments