ನೋಡೆ ಗೋಪಿ ನೋಡೆ

ನೋಡೆ ಗೋಪಿ ನೋಡೆ

(ರಾಗ ಕನ್ನಡಕಾಂಭೋಜ ಏಕತಾಳ ) ನೋಡೆ ಗೋಪಿ ನೋಡೆ ಗಾಡಿಗಾರ ಕೃಷ್ಣನ ದುಡುಕು ಮಾಡುವ ಮಾಟಂಗಳೆಲ್ಲ ||ಪ|| ಅಡಿಗಡಿಗೆ ಮಡದಿಯರುಟ್ಟಿರುವ ಬಿಡದೆ ನಿರಿಗಳ ಮೆಲ್ಲನೆ ಹರಡುವ ಜಡಿಜಡಿದುಡಿಯ ಮೇಲಿಹೋ ಮಕ್ಕಳ ಕೆಡಹಿ ತೊರೆದ ಮೊಲೆಗಳನುಂಬವನ || ಏನೆಂದಳದಿರೋ ಕೃಷ್ಣಾ ಎಂದು ಮಾನವ ಕೈಯಲಿ ಕೊಟ್ಟರಂಜಿಸೆ ಆನೆಯ ಕಂಡು ತಾನಳುತಿಹನು ಮನದೊಳಾನೆಯ ಹೋಗಿಸಿ ಕೊಡೆಂಬನು || ಚಿನ್ನ ಹಕ್ಕಿಯ ನಿಲಬೇಕೆಂದು ಕನ್ನಡಿ ಕೈಯಲಿ ಕೊಟ್ಟು ರಂಜಿಸೆ ತನ್ನೊಳು ತಾನೆ ಪ್ರತಿಫಲಿಸಲು ಚಿನ್ನನ ಕರೆದು ಕೊಡೇನೆಂಬನು || ಹರಿವೋ ಹಾವು ಉರಿವಾ ಕಿಚ್ಚು ಸೆರಗಿಲಿ ತಂದು ಕಟ್ಟಿ ಕೊಡೆಂಬನು ಕರುವೆಂದು ಕರಡಿಯನೇ ತಂದು ತುರುಗಳ ಮೊಲೆಗಳನುಣಿಸಿ ಕೊಡೆಂಬನು || ಇಂಥಾ ಲಕ್ಷ್ಮೀಕಾಂತನ ನೋಡಿ ಕಾಂತೆಯರೆಲ್ಲರು ಕಾಡುತಲಿಪ್ಪರು ಸಂತತ ವರದ ಪುರಂದರವಿಠಲ ಎಂತಾಡಿಸಲಂತಾಡುವ ರಂಗನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು