ನಿನ್ನ ಮಗನ ಬಾಧೆ
(ರಾಗ ಸೌರಾಷ್ಟ್ರ ಅಟತಾಳ )
ನಿನ್ನ ಮಗನ ಬಾಧೆ ಬಲು ಘನವಾಗಿದೆ
ಇನ್ನೆಷ್ಟು ತಾಳುವೆವೆ, ಗೋಪಿ
ಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆ
ಇನ್ನೆಷ್ಟು ಸೈರಿಪೆವೆ ||ಪ||
ಹಾಲು ಮೊಸರು ಮಜ್ಜಿಗೆ ಭಾಂಡವನೆಲ್ಲ
ಕೋಲಲಿ ಬಡಿದಿಟ್ಟನೆ ಗೋಪಿ
ಪೇಳುವುದಿನ್ನೇನು ನಮ್ಮಂಥ ಬಡವರ
ಗೋಳಿನ್ನು ತಟ್ಟದೇನೆ ||
ನೆಲುವಿಗೆ ಹಾಲು ನಿಲುಕಿ ಸೇರಿಸುವಾಗ
ಮೊಲೆಗೆ ಕೈ ಚಾಚಿದನೆ ಗೋಪಿ
ಸುಲಭನಲ್ಲ ಕಾಣೆ ನಿನ್ನ ಮಗನು ಈಗ
ಕಲಿಯುಗದವನು ಕಾಣೆ ||
ಹೊದ್ದಿ ಮೆಲ್ಲನೆ ಸನ್ನೆ ಮಾಡಿ ಕರೆವ ಈ
ಬುದ್ಧಿಯು ಒಳ್ಳೇದೇನೆ, ಗೋಪಿ
ಮುದ್ದು ಮಾಡಿ ಸಾಕಿ ಮಗನಿಗೆ ಬಸವನ
ಮುದ್ರೆಯ ಒತ್ತಿದ್ಯೇನೆ ||
ಸರಿಯ ಗೋಪೆರ ಮುಂದೆ ಶಿರವನು ಬಾಗುವ
ತೆರನ ಮಾಡಿದನು ಕಾಣೆ, ಗೋಪಿ
ಧರೆಯೊಳಗಿರುವಂಥ ಜಾರಜೋರರಿಗೆಲ್ಲ
ಗುರುವು ತಾನೆನಿಸಿದನೆ ||
ಎಷ್ಟು ಹೇಳುವುದಿನ್ನು ಈ ಬಗೆಯಾದರೆ
ನಿಷ್ಠುರ ಬಹುದು ಕಾಣೆ, ಗೋಪಿ
ಸೃಷ್ಟೀಶ ಶ್ರೀರಂಗಧಾಮ ಪುರಂದರ-
ವಿಟ್ಠಲರಾಯ ಕಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments