ತುತ್ತುರು ತೂರೆಂದು ಬತ್ತೀಸ ರಾಗಗಳನು
( ರಾಗ ಆನಂದಭೈರವಿ ಅಟತಾಳ)
ತುತ್ತುರು ತೂರೆಂದು ಬತ್ತೀಸ ರಾಗಗಳನು
ಚಿತ್ತವಲ್ಲಭ ತನ್ನ ಕೊಳಲನೂದಿದನು ||ಪ||
ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗ ರಾಗ
ಕೇಳಿ ರಮಣಿ(ಯ)ರತಿ ದೂರದಿಂದ
ಫಲಮಂಜರಿ ಗೌಳಿ ದೇಶಾಕ್ಷರಿ ರಾಗಂಗಳನು
ನಳಿನನಾಭನು ತನ್ನ ಕೊಳಲನೂದಿತನು ||
ಅಂಗಾಲಿಗೆ ವಂಕಿಕ್ಕಿ ಮುಂಗಾಲಿಗೆ ಕಡಗವನಿಟ್ಟು
ಉಂಗುಷ್ಠದಲಿ ಉಂಗುರವ ಹಾಕಿ
ಅಂಗಣಕ್ಕೆ ಬಂದು ನಿಂತು ಹಿಂಗಣಕ್ಕೆ ಮೊಲೆಕಟ್ಟುವಳು
ಗಂಗಾಜನಕನ ಬಳಿಗೆ ಶೃಂಗರಿಸಿ ಬಂದು ನಿಂತಳು ||
ಕಣ್ಣಿಗೆ ಕಾಡಿಗೆಯೆಂದು ಚೆನ್ನೆ ಶ್ರೀಗಂಧವನಿಟ್ಟು
ಬೆಣ್ಣೆನೆಲ್ಲವು ತಮ್ಮ ಕರುಗಳಿಗಿಕ್ಕಿ
ಅಣ್ಣೆನ್ನಾರುಣ್ಣೆಣ್ಣೆಂದು ಗಂಡಗೆ ಮುರವನಿಕ್ಕಿ
ಚಿನ್ನ ಕೈಯಿಂದಲಿ ಹಸ್ತಕ್ಕೆ ಪನ್ನೀರು ತಂದಿರಿಸಿದಳು ||
ಹಸುವಿನ ಮೊಲೆಗೆ ತಮ್ಮ ಶಿಶುವನು ಉಣಚಾಚಿ
ಪಶುಗಳ ಕರುಗಳ ಪಿಡಿದೆತ್ತಿಕೊಂಡು
ಬಿಸಿ ಬಿಸಿ ಓಗರವೆಲ್ಲ ಪತಿಯೆಂದು ಪಶುಗಳಿಗಿಕ್ಕಿ
ಕುಸುಮನಾಭನ ಬಳಿಗೆ ಹಸ್ತವಲಿದು ನಿಂತಳು ||
ತುರುಹಿಂಡುಗಳ ಕಾಯ್ದು ಸುರರಿಗೆ ಸುಖವನಿತ್ತೆ
ತರುಣಿ ನಿಮ್ಮ ಗಂಡರು ಬೈವರಮ್ಮ
ಮರುಳಾಗದೆ ನೀವು ನಿಮ್ಮ ಮನೆಗಳನೆ ಬಿಟ್ಟುಕೊಂಡು
ಇರುವುದು ಉಚಿತವಲ್ಲ ಭರದಿಂದ ಹೋಗಿರೆ ||
ಮನೆಯೆಂಬೊದಿಲ್ಲ ಮನೆ ನಮಗೆ ಬೇರೊಂದಿಲ್ಲ
ಮನೆ ಉಂಟೆ ಶ್ರೀ ಕೃಷ್ಣ ನಿನ್ನ ಬಿಟ್ಟು
ಮನವಿಲ್ಲದೆ ಮನೆಯು ಕಾಣೆ ಮನೆ ನಮಗೆ ಮತ್ತೊಂದು ಇಲ್ಲ
ಘನಮಹಿಮ ಶ್ರೀ ಕೃಷ್ಣ ನಿಮ್ಮ ಮನೆಯೆಂಬೋದು ಘನಮಹಿಯು ||
ನಿಂದು ತಲೆಯ ಬಾಗಿ ಬಂದು ಕಣ್ಣೀರನೆ ಒರೆಸಿ
ಚಂದದುಂಗುಷ್ಠದಲಿ ಬರೆವುತಲಿ
ಅಂದೆಂದು ನಮ್ಮ ಕೂಡಿ ಹಂಬಲ ಯಾಕೋ ನಿನ್ನ
ಅಂದೇವೆ ಪುರಂದರವಿಟ್ಠಲರಾಯನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments