ನೆಚ್ಚಬೇಡ ಪ್ರಾಣಿ ಸಂಸಾರ

ನೆಚ್ಚಬೇಡ ಪ್ರಾಣಿ ಸಂಸಾರ

(ರಾಗ ಶಂಕರಾಭರಣ ಝಂಪೆ ತಾಳ ) ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ- ದ್ಹುಚ್ಚು ಬುದ್ಧಿಲಿ ನೀನು ಕೆಡಬೇಡ ಕಂಡ್ಯ ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ ಮುಚ್ಚಿದ ಮೇಲುಂಟೆ ನರಜನ್ಮ ಸ್ಥಿರವೆಂದು ||ಪ|| ನೆಂಟರಿಷ್ಟರು ಬಂದು ಬಳಗವು ಹರಿ ಕೊಟ್ಟ- ದುಂಟಾದರೆ ಬಾಚುವರು ಕಂಟಕ ಬಂದಾಗ ಒಪ್ಪೊತ್ತಿರದು ಕಡೆಗೆ ಕುಂಟೆಯ ತರಿದೊಟ್ಟಿ ಸುಡುವರು ನಿನ್ನ || ಅತಿಪ್ರೀತಿಯಿಂದಲಿ ಮದುವ್ಯಾದ ಮೋಹದ ಸತಿ ನಿನ್ನ ಮರಣಕಾಲದಲ್ಲಿ ಗತಿಯಾರು ತನಗೆಂದು ಗೋಳಿಡುವಳಲ್ಲದೆ ಜೊತೆಯಾಗಿ ನಿನ್ನ ಸಂಗಡ ಬಾಹೋಳಲ್ಲ || ಒಂದೆಂದು ಪರಿಯ ಪ್ರೇಮವ ಮಾಡಿ ಸಲಹಿದ ಕಂದ ನಿನ್ನವಾಸನಕಾಲದಲ್ಲಿ ಮುಂದೆ ಸಂಸಾರ ನಡೆವ ಉಪಾಯವು ಆವು- ದೆಂದು ಚಿಂತಿಸುವ ಸಂಗಡ ಬಾಹೋನಲ್ಲ || ಅಷ್ಟ ಕಂಭವನಿಕ್ಕಿ ಚೌಕದುಪ್ಪರಿಗೆಯ ಕಟ್ಟಿದ ಮನೆಯು ಇದ್ದಲ್ಲೆ ಇಹುದು ಹೊಟ್ಟೆ ತುಂಬ ಉಣದೆ ಅರ್ಥವ ಗಳಿಸಿದ್ದು ಒಟ್ಟಿಟ್ಟಲ್ಲಿರದೆ ಸಂಗಡ ಬಾಹೋದಲ್ಲ || ಇಂತು ಒಂದೊಂದರಿಂದಲೂ ಪ್ರಯೋಜನವಿಲ್ಲ ಅಂತ್ಯ ಕಾಲಕೆ ಒಂದೂ ಬಾಹೋದಲ್ಲ ಕಂತುಜನಕ ಸಿರಿಪುರಂದರವಿಠಲನ ಸಂತತ ಚಿಂತೆಯೊಳಿರು ಕಂಡ್ಯ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು