ನಾರಿರನ್ನಳೆ ಕಂಡೆಯ

ನಾರಿರನ್ನಳೆ ಕಂಡೆಯ

(ರಾಗ ರೇಗುಪ್ತಿ ತ್ರಿಪುಟ ತಾಳ ) ನಾರಿರನ್ನಳೆ ಕಂಡೆಯ ||ಪ|| ವಾರಿಜನಾಭ ದೇವರದೇವ ಸುಗುಣ ಬೇಲೂರ ಚೆನ್ನಿಗರಾಯನ, ಎನ್ನ ಪ್ರಿಯನ ||ಅ|| ಹೊಸಬಗೆ ಮಾಟದ, ಪೊಳೆವ ಕಿರೀಟದ ಎಸೆವ ಮಾಣಿಕದೋಲೆಯ ಶಶಿಕಾಂತಿಗಧಿಕವೆಂದೆನಿಪ ಮೂಗುತಿಯಿಟ್ಟ ಬಿಸಜಾಕ್ಷ ಚೆನ್ನಿಗರಾಯನ, ಎನ್ನ ಪ್ರಿಯನ || ತಿದ್ದಿದ ಕಸ್ತೂರಿ ತಿಲಕದಿಂದೊಪ್ಪುವ ಮುದ್ದು ಮೊಗದ ಸೊಂಪಿನ ಹೊದ್ದಿದ ಕುಂಕುಮರೇಖೆ ಪೀತಾಂಬರ ಪೊದ್ದಿದ ಚೆನ್ನಿಗರಾಯನ, ಎನ್ನ ಪ್ರಿಯನ || ಮಘಮಘಿಸುವ ಮಲ್ಲಿಗೆ ಜಾಜಿ ಸಂಪಿಗೆ ಬಗೆಬಗೆ ಪೂಮಾಲೆಯ ಅಗರುಚಂದನ ಗಂಧದನುಲೇಪನವ ಗೆಯ್ದ ಜಗವ ಮೋಹಿಪ ಚೆನ್ನನ, ಆ ಸುಗುಣನ || ದನುಜರ ಗಂಡನೆಂದಿನಿಪ ಪೆಂಡೆಯನಿಟ್ಟು ಮಿನುಗುವ ಪೊಂಗೆಜ್ಜೆಯ ಘನಶಂಖಚಕ್ರಗದಾಂಕಿತ ಪಿಡಿದ ಅನುಪಮ ಚೆನ್ನಿಗರಾಯನ, ಚೆಲ್ವ ಕಾಯನ || ಲೀಲೆಯಿಂದಲಿ ಬಂದು ವೇಲಾಪುರದಿ ನಿಂತ ಪಾಲಗಡಲಶಯನ ಪಾಲನ ಇಂದು ಶ್ರೀಪುರಂದರವಿಠಲ ಬೇಲೂರ ಚೆನ್ನಿಗರಾಯನ ಬಾಳ ಪ್ರಿಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು